ಸರ್ವೇ ಇಲಾಖೆಗೆ 2 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ

h31-bairegouda
Published on

ಹುಬ್ಬಳ್ಳಿ: ಸಿಬ್ಬಂದಿ ಕೊರತೆಯಿಂದ ಸರ್ವೇ ಕಾರ್ಯಗಳು ವಿಳಂಬವಾಗುತ್ತಿವೆ. 357 ಸಹಾಯಕ ಭೂ ದಾಖಲೆ ಅಧಿಕಾರಿಗಳು ಹಾಗೂ ಸರ್ವೇದಾರರನ್ನು ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಕೆಪಿಎಸ್‌ಸಿ ಅಧಿಕಾರಿಗಳ ಜತೆ ಸಭೆ ಮಾಡಿ ವಿವವರಿಸಿದ್ದೇನೆ. ಫೆಬ್ರವರಿಯಲ್ಲಿ 357 ಜನರ ನೇಮಕಾತಿಗೆ ಅರ್ಜಿ ಕರೆಯಲಾಗುವುದು. ಎರಡನೇ ಹಂತದಲ್ಲಿ ಸರ್ವೇ ಇಲಾಖೆಯಲ್ಲಿ ಖಾಲಿಯಿರುವ 592 ಹುದ್ದೆಗಳ ಭರ್ತಿಗೂ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಬಾಕಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಸುಮಾರು 2 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದ ತಾಲೂಕು ಆಡಳಿತಸೌಧದ ವಿವಿಧ ಇಲಾಖೆಗಳ ಕಚೇರಿಗಳಿಗೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ 750 ಪರವಾನಗಿ ಸರ್ವೇದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಆಯಾ ತಾಲೂಕಿನಲ್ಲಿರುವ ಸರ್ವೇ ಬಾಕಿ ಆಧಾರದ ಮೇಲೆ ಸರ್ವೇದಾರರನ್ನು ಹಂಚಿಕೆ ಮಾಡಲಾಗುವುದು. ಎಲ್ಲಾ ಕೆಲಸಗಳು ಪರವಾನಿಗಿ ಸರ್ವೇದಾರರಿಂದ ಆಗುವುದಿಲ್ಲ ಎಂದರು.
ಭೂ ದಾಖಲೆಗಳ ಇಲಾಖೆಯಲ್ಲೂ ವ್ಯಾಪಕ ಸಮಸ್ಯೆಗಳಿವೆ. ಕೆಲ ಭೂ ದಾಖಲೆಗಳ ಕಚೇರಿಯಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೂ ಭೂ ದಾಖಲೆಗಳ ಕೆಲಸ ಬಾಕಿಯಿವೆ. ಆಧುನಿಕ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಆಧುನಿಕ ಉಪಕರಣ ನೀಡುವುದರ ಮೂಲಕ ಸರ್ವೇ ಕಾರ್ಯಗಳು ಶೀಘ್ರವೇ ನಡೆಯಬೇಕು. 20 ಕೋಟಿ ರೂ. ವೆಚ್ಚದಲ್ಲಿ ಎಲ್ಲ ತಾಲೂಕುಗಳಿಗೂ ಹೊಸ ತಂತ್ರಜ್ಞಾನಾಧಾರಿತ ಉಪಕರಣ ವಿತರಿಸಲು ಈ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಹೊಸ ತಂತ್ರಜ್ಞಾನಾಧಾರಿತ ಉಪಕರಣ ಹಾಗೂ ಸಿಬ್ಬಂದಿ ನೇಮಕಾತಿಯಿಂದ ಸರ್ವೇ ಕೆಲಸಗಳು ವೇಗ ಪಡೆಯಲಿವೆ. ಅಲ್ಲದೇ ಯಾವ ಕೆಲಸಗಳು ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ಕೆಲವು ಕಡೆ ಡ್ರೋಣ್ ಮೂಲಕ ಸರ್ವೇ ಕಾರ್ಯಗಳು ನಡೆಯುತ್ತಿವೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಸರ್ವೇ ಇಲಾಖೆಯಲ್ಲಿನ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು ಎಂದರು.
ಕಳೆದ ಬಾರಿ ಹುಬ್ಬಳ್ಳಿ ಕಚೇರಿಗೆ ಭೇಟಿ ನೀಡಿದಾಗ ಆನ್‌ಲೈನ್ ಮೂಲಕ ಕಡತಗಳ ವಿಲೇವಾರಿ ಮಾಡಲು ತೀರ್ಮಾನಿಸಲಾಗಿತ್ತು. ಅದು ಅನುಷ್ಠಾನವಾಗಿರಲಿಲ್ಲ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕುವುದರಿಂದ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸಬಹುದು. ಇದರಿಂದ ಕಡತಗಳು ಕಳೆದು ಹೋಗುವುದು ತಪ್ಪಲಿವೆ. ಅರ್ಜಿಗಳು ಯಾರ ಬಳಿ, ಎಷ್ಟು ದಿನಗಳಿಂದ ಇವೆ ಎಂಬುದನ್ನು ತಹಸೀಲ್ದಾರರು ಪರಿಶೀಲಿಸಬಹುದು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುವುದಿಲ್ಲ. ಇ- ಆಫೀಸ್‌ನಿಂದಾಗಿ ಕಾಲಕಾಲಕ್ಕೆ ಕಡತಗಳು ವಿಲೇವಾರಿಯಾಗುತ್ತಿವೆ. ಮರಾಠರ ಕಾಲದ ಭೂ ದಾಖಲೆಗಳು ಇಲ್ಲಿವೆ. 200 ವರ್ಷಗಳ ಹಳೆಯ ಶಿಥಿಲಾವಸ್ಥೆ ದಾಖಲೆಗಳು ಸಹ ರೆಕಾರ್ಡ್ ರೂಮಿನಲ್ಲಿವೆ. ಅವುಗಳನ್ನು ಗಣಕೀಕರಣ ಮಾಡಲಾಗುವುದು ಎಂದರು.
ಉಪ ನೋಂದಣಾಧಿಕಾರಿಗಳ ಕಚೇರಿಯ ಅರ್ಜಿಗಳು ಮೊದಲು 2 ಗಂಟೆಯಲ್ಲಿ ನೋಂದಣಿ ಆಗುತ್ತಿದ್ದವು. ಈಗ 15 ನಿಮಿಷಗಳಲ್ಲಿ ನೋಂದಣಿಯಾಗಲಿವೆ. ಕೆಲ ತಾಲೂಕುಗಳಲ್ಲಿ ದಾಖಲೆ ತಿದ್ದುವುದು, ಕಳ್ಳತನ ಮಾಡುವುದು, ಕಳೆದಿರುವುದು ಕಂಡು ಬಂದಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕು ಕಚೇರಿಗೆ ಅವಶ್ಯಕವಾಗಿ ಬೇಕಾಗಿರುವ ಸ್ಕಾೃನರ್, ಕಂಪ್ಯೂಟರ್ ವಿತರಿಸಲಾಗಿದೆ. ಒಂದು ವಾರದಲ್ಲಿ ರೆಕಾರ್ಡ್ ರೂಮಿನಲ್ಲಿರುವ ಎಲ್ಲ ದಾಖಲೆಗಳನ್ನು ಗಣಕೀಕರಣ ಮಾಡಲಾಗುವುದು. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿರುವ ಏಜೆಂಟರ ಹಾವಳಿ ತಡೆಯಲು ಕ್ರಮ ವಹಿಸಲಾಗುವುದು ಎಂದರು.

ಭೂ ಸುರಕ್ಷಾ ಯೋಜನೆ ಶೀಘ್ರ ಆರಂಭ
ಭೂ ಸುರಕ್ಷಾ ಯೋಜನೆಯನ್ನು ಫೆಬ್ರವರಿ ಮೊದಲ ವಾರದಲ್ಲಿ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ರಾಜ್ಯದ 31 ಜಿಲ್ಲೆಗಳ ಪ್ರತಿ ತಾಲೂಕುಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು. ಅಗತ್ಯ ಸಿಬ್ಬಂದಿ, ಸಲಕರಣೆಗಳನ್ನು ನೀಡಲಾಗಿದೆ. ಅಲ್ಲದೇ ಸಿಬ್ಬಂದಿ ವೇತನವನ್ನು ಸರ್ಕಾರವೇ ಭರಿಸಲಿದೆ. ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ರೆಕಾರ್ಡ್ ರೂಮಿನಲ್ಲಿರುವ ಎಲ್ಲ ದಾಖಲೆಗಳನ್ನು ಗಣಕೀಕರಣ ಮಾಡಬೇಕು. ಆ ದಾಖಲೆಗಳನ್ನು ಜನರು ಪಡೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿಗಳ ದಾಖಲೆಗಳನ್ನು ಗಣಕೀರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ., ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಇತರರು ಇದ್ದರು.

ದಿಢೀರ್ ಭೇಟಿ
ನಗರದ ಮಿನಿ ವಿಧಾನ ಸೌಧದಲ್ಲಿರುವ ತಹಸೀಲ್ದಾರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ಬೆಳಗ್ಗೆ ಧಿಡೀರ್ ಭೇಟಿ ನೀಡಿದರು.
ಬೆಳಗಾವಿ ಪ್ರವಾಸದಲ್ಲಿದ್ದ ಸಚಿವರು, ತಹಸೀಲ್ದಾರ್ ಹಾಗೂ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಅಧಿಕಾರಿಗಳ ಹಾಜರಿ, ಸ್ವಚ್ಛತೆ ಹಾಗೂ ಕಡತಗಳ ವಿಲೇವಾರಿ ಬಗ್ಗೆ ತಹಸೀಲ್ದಾರರಾದ ಕಲಗೌಡ ಪಾಟೀಲ, ಪ್ರಕಾಶ ನಾಶಿ ಅವರಿಂದ ಮಾಹಿತಿ ಪಡೆದರು.
ಬಳಿಕ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರನ್ನು ಕರೆಯಿಸಿ, ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಮತ್ತು ಕಂದಾಯ ಇಲಾಖೆಯಲ್ಲಿ ಏಜೆಂಟರ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಅಲ್ಲದೆ, ಅಧಕಾರಿಗಳ ಹೆಸರು ಹೇಳಿಕೊಂಡೇ ಏಜಂಟರು ಪಾರಮ್ಯ ಮೆರೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದನ್ನೆಲ್ಲ ನೋಡಿಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ ಎಂದರೆ ಏನರ್ಥ? ಎಂದು ಜಿಲ್ಲಾಧಿಕಾರಿಗಳ ಎದುರೇ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net