ಸರಳವಾಗಿ ಮದುವೆ ಆಗುವುದೇ ಆದರ್ಶ

CTD MADUVE
Published on

ಚಿತ್ರದುರ್ಗ: ಉಳ್ಳವರ ಮದುವೆಗಳು ಅರಮನೆಯಲ್ಲೋ, ವಿಮಾನದಲ್ಲೋ, ಐಷಾರಾಮಿ ಹೋಟೆಲ್‌ಗಳಲ್ಲೇ ಆಗುತ್ತವೆ. ಬಡವರು ಸಾಮೂಹಿಕ ವಿವಾಹಗಳಲ್ಲಿ ಸತಿಪತಿಗಳಾಗುತ್ತಾರೆ. ಸರಳವಾಗಿ ಮದುವೆ ಆಗುವುದೇ ಆದರ್ಶ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ಸೋಮವಾರ ನಡೆದ 35ನೇ ವರ್ಷದ 5ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾ ಡಿ, ಶ್ರೀಮಂತರ ಮದುವೆಗಳಲ್ಲಿ ಪ್ರತಿಷ್ಠೆ ಎದ್ದು ಕಾಣುತ್ತದೆ. ಇಂಥ ಮದುವೆಗಳಲ್ಲಿ ಪಾಲಕರಿಗೆ ಸಾಲ ಮಾಡಲು ಅವಕಾಶವಿ ರುವುದಿಲ್ಲ.

ಆದರೆಮ ಬಡವರು ಪ್ರತಿಷ್ಠೆಗೆ ಒಳಗಾಗಿ ಅದ್ದೂರಿ ಮದುವೆಗೆ ಮುಂದಾದರೆ ಸಾಲದ ಬಲೆಗೆ ಬೀಳಬೇಕಾಗುತ್ತದೆ. ಶ್ರೀ ಮಠ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಶ್ರೀ ಶಾಂತವೀರ ಶ್ರೀಗಳ ಗದ್ದುಗೆ ಸ್ಥಳದಲ್ಲಿ ನೀವಿಂದು ವಿವಾಹವಾಗಿದ್ದೀರಿ. ಗುರುಗಳ ಆಶೀರ್ವಾದ ನವ ದಂಪತಿಗಳ ಮೇಲೆ ಸದಾ ಇರುತ್ತದೆ ಎಂದರು.

ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿಷ್ಠೆ, ಅಹಂಕಾರ ದಿಂದ ಎಷ್ಟೋ ಸಂಸಾರಗಳು ಮುರಿದು ಬೀಳುತ್ತಿವೆ. ಸತಿ-ಪತಿಯರ ನಡುವೆ ಪ್ರೀತಿ ಇರಬೇಕು. ಇಲ್ಲವಾದರೆ ಮನಸ್ತಾಪಗಳಿಂದ ವಿಚ್ಛೇದನಕ್ಕೆ ದಾರಿಯಾಗುತ್ತದೆ. ಅನೇಕ ವಿದ್ಯಾವಂತರ ಜೀವನ ಅಧೋಗತಿಗೆ ಹೋಗುತ್ತಿದೆ ಎಂದರು.

ದಂಪತಿಗಳ ಮಧ್ಯೆ ಅನುಮಾನ, ಅಪನಂಬಿಕೆ ಇರಬಾರದು. ಇವುಗಳಿಗೆ ಔಷಧವಿಲ್ಲ. ಸಂಸಾರ ಸುಸೂತ್ರವಾಗಿ ನಡೆಯಬೇಕಾದರೆ ಇಂಥವುಗಳಿಗೆ ಜೀವನದಲ್ಲಿ ಅವಕಾಶ ಮಾಡಿಕೊಡಬಾರದು. ನಮ್ಮದು ಬಸವತತ್ವದ ಮಠ. ಬಸವತತ್ತ್ವದ ಆಧಾರದ ಮೇಲೆ ಇಲ್ಲಿ ವಿವಾಹಗಳು ನೆರವೇರುತ್ತಿವೆ ಎಂದು ತಿಳಿಸಿದರು.

ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವ ಪರಂಪರೆಯನ್ನು ಶ್ರೀ ಮಠ ಮುಂದುವರಿಸಿಕೊಂಡು ಬರುತ್ತಿದೆ.ನವ ದಂಪತಿ ಪರಸ್ಪರ ಅರ್ಥೈಸಿಕೊಂಡು ಅನ್ಯೋನ್ಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

19 ಜೋಡಿಗಳು ನವ ಜೀವನಕ್ಕೆ ಕಾಲಿರಿಸಿದವು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಸಂಗಡಿಗರು ಪ್ರಾರ್ಥಿಸಿದರು. ಚಿನ್ಮಯಾನಂದ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net