ಸರಣಿ ಅಪಘಾತದಲ್ಲಿ ಓರ್ವ ಸಾವು

14-55
ಬೆಳಗಾವಿ ತಾಲೂಕು ಹಿರೇಬಾಗೇವಾಡಿ ಬಳಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಲಾರಿ, ಟ್ರ್ಯಾಕ್ಟರ್ ನಜ್ಜುಗುಜ್ಜಾಗಿರುವುದು.
Published on

ಹಿರೇಬಾಗೇವಾಡಿ, ಬೆಳಗಾವಿ: ಸಮೀಪದ ಬಡೇಕೊಳ್ಳಮಠ ಕ್ರಾಸ್ ಬಳಿ ಹೆದ್ದಾರಿ ಇಳಿಜಾರಿನಲ್ಲಿ ಭಾನುವಾರ ಲಾರಿ, ಟ್ರ್ಯಾಕ್ಟರ್ ಮತ್ತು ಎರಡು ದ್ವಿಚಕ್ರ ವಾಹನ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಬೈಲಹೊಂಗಲ ತಾಲೂಕಿನ ಹುಣಶೀಕಟ್ಟಿಯ ಟ್ರ್ಯಾಕ್ಟರ್ ಚಾಲಕ ಮೆಹಬೂಬಸುಬಾನಿ ಮುಗುಟಸಾಬ ಜಮಾದಾರ (20) ಮೃತಪಟ್ಟವರು. ಕಲ್ಲು ಕ್ವಾರಿಯಿಂದ ಜಲ್ಲಿ ತುಂಬಿಕೊಂಡು ಹೆದ್ದಾರಿಯ ಇಳಿಜಾರಿನಲ್ಲಿ ಹುಣಶೀಕಟ್ಟಿ ಕಡೆ ಸಾಗುತ್ತಿದ್ದ ಟ್ರಾೃಕ್ಟರ್‌ಗೆ ಹಿಂದಿನಿಂದ ಲಾರಿ ಅಪ್ಪಳಿಸಿದೆ.

ಮುಂದೆ ಎರಡು ದ್ವಿಚಕ್ರ ವಾಹನಗಳ ಮೇಲೆ ಪ್ರತ್ಯೇಕವಾಗಿ ಸಾಗುತ್ತಿದ್ದ ಬಸಾಪೂರ ಗ್ರಾಮದ ಸಹೋದರರಾದ ಶಿವಾನಂದ ಮಲ್ಲಪ್ಪ ಕಲ್ಲೂರ (20) ಮತ್ತು ಪ್ರಜ್ವಲ ಮಲ್ಲಪ್ಪ ಕಲ್ಲೂರ (18) ಅವರಿಗೆ ಟ್ರ್ಯಾಕ್ಟರ್ ಹಾಯ್ದು ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ ನಜ್ಜುಗುಜ್ಜಾಗಿದೆ. ಲಾರಿ ಮುಂದೆ ಸಾಗಿ ರಸ್ತೆ ಎಡಬದಿಯಲ್ಲಿ ಪಲ್ಟಿ ಹೊಡೆದಿದೆ. ತುಮಕೂರು ಮೂಲದ ಚಾಲಕ ಜಾಫರ್ ಸಾದಿಕ್ ಮತ್ತು ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಒಳಗೆ ಸಿಲುಕಿದ್ದ ಚಾಲಕನನ್ನು ಸಾರ್ವಜನಿಕರು ಹರಸಾಹಸಪಟ್ಟು ಹೊರತೆಗೆದಿದ್ದಾರೆ. ಅಪಘಾತದಿಂದ ಸುಮಾರು ಒಂದು ತಾಸು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಹಿರೇಬಾಗೇವಾಡಿ ಪೊಲೀಸರು ಮತ್ತು ಅಶೋಕಾ ಬಿಲ್ಡಕಾನ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ವಾಹನ ಸಂಚಾರ ಸುಗಮಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net