ಸರಣಿ ಅಪಘಾತದಲ್ಲಿ ಅರಣ್ಯ ಇಲಾಖೆ ನೌಕರ ಮೃತ :ಮೂವರಿಗೆ ಗಂಭೀರ ಗಾಯ

ಮೃತ ಶಾಂತಾ
Published on


ಮಡಿಕೇರಿ : ಕುಶಾಲನಗರ ಸಮೀಪದ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ಗುರುವಾರ ಸಂಜೆ ನಡೆದ ಸರಣಿ ಅಪಘಾತದಲ್ಲಿ ಅರಣ್ಯ ಇಲಾಖೆಯ ಶೀಘ್ರ ಕಾರ್ಯಾಚರಣೆ ತಂಡದ ಸದಸ್ಯ ಶಾಂತಾ(30) ಮೃತಪಟ್ಟು, ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಪುಟ್ಟ ಮಕ್ಕಳು ಪಾರಾಗಿದ್ದಾರೆ.


ಕುಶಾಲನಗರ ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಒಂದಕ್ಕೆ ಕಾರೊಂದು ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ಟ್ರ್ಯಾಕ್ಟರ್ ಟ್ರೈಲರ್ ತಿರುಗಿದೆ. ಈ ವೇಳೆ ಹುಣಸೂರು ಕಡೆಯಿಂದ ಬರುತ್ತಿದ್ದ ಶಾಂತಾ ಅವರ ಕಾರಿಗೆ ಟ್ರೈಲರ್ ಡಿಕ್ಕಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ಜತೆಯಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಒಬ್ಬರಿಗೆ ತೀವ್ರ ಪೆಟ್ಟಾಗಿರುವ ಕಾರಣ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.


ಶಾಂತಾ ಅವರು ಕೊಡಗಿನ ಬಸವನಹಳ್ಳಿಯ ದಿಡ್ಡಳ್ಳಿ ನಿರಾಶ್ರಿತರ ಕ್ಯಾಂಪ್‌ನಲ್ಲಿದ್ದರು. ಮೃತರ ಮನೆಗೆ ಶುಕ್ರವಾರ ಡಿಎಫ್‌ಒ ಪೂವಯ್ಯ, ಆರ್‌ಎಫ್‌ಒಗಳಾದ ಶಿವರಾಮ್, ಅನನ್ಯಕುಮಾರ್, ಡಿಆರ್‌ಎಫ್‌ಒ ಅನಿಲ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಶಾಂತಾ ಅವರ ಹುಟ್ಟೂರಾದ ಹುಣಸೂರು ತಾಲೂಕಿನ ನಾಗಪುರದಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು. ಈ ಸಂಬಂಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿಯಾದ ಕಾರು ಹಾಗೂ ಟ್ರಾೃಕ್ಟರ್ ಜಖಂಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net