

ಸರಗೂರು: ಪಟ್ಟಣ ಪಂಚಾಯಿತಿಯ 2023-2024ನೇ ಸಾಲಿನ 28.90 ಲಕ್ಷ ರೂ. ಉಳಿತಾಯ ಆಯವ್ಯಯ ಮಂಡಿಸಲಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮಚಂದ್ರ ತಿಳಿಸಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಬಜೆಟ್ ಮಂಡನೆ ಸಭೆಯಲ್ಲಿ ಉಮಾ ರಾಮಚಂದ್ರ ಬಜೆಟ್ ಮಂಡಿಸಿದರು. 2023-24ನೇ ಸಾಲಿನ ಪ್ರಾರಂಭಿಕ ಶುಲ್ಕ 4.82 ಕೋಟಿ ರೂ., ಒಟ್ಟು ನಿರೀಕ್ಷಿತ ಆದಾಯ 8.94 ಕೋಟಿ ರೂ., ಇದರಲ್ಲಿ ಒಟ್ಟು ಜಮಾ 8.94 ಕೋಟಿ ರೂ., ಈ ಪೈಕಿ ನಿರೀಕ್ಷಿತ ಪಾವತಿಗಳು 13.63 ಕೋಟಿ ರೂ. ಆಗಲಿದೆ. ಹೀಗಾಗಿ 28.90 ಲಕ್ಷ ರೂ. ಉಳಿತಾಯವಾಗಲಿದೆ ಎಂದರು.
ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸುವ ಜತೆಗೆ ಅಭಿವೃದ್ಧಿಗೆ ಆದ್ಯತೆ ನೀಡಿರುವ ಬಜೆಟ್‌ನಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ 1.15 ಕೋಟಿ ರೂ. ಸಂಗ್ರಹಿಸಲಾಗಿದೆ. ಆಸ್ತಿ ತೆರಿಗೆಯಿಂದ 51 ಲಕ್ಷ ರೂ., ನೀರು ಸರಬರಾಜು ಶುಲ್ಕ 30 ಲಕ್ಷ ರೂ., ವಾಣಿಜ್ಯ ಸಂಕೀರ್ಣಗಳ ಬಾಡಿಗೆ 8.50 ಲಕ್ಷ ರೂ., ಉದ್ದಿಮೆ ರಹದಾರಿ 5.30 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ 7ಲಕ್ಷ ರೂ. ಸೇರಿದಂತೆ ಇನ್ನಿತರ ಮೂಲಗಳಿಂದ 14 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ ಸರ್ಕಾರದಿಂದಲೂ 3.52 ಕೋಟಿ ರೂ. ವಿವಿಧ ಅನುದಾನ ಹಂಚಿಕೆಯಾಗಿದ್ದು, ಎಸ್‌ಎಫ್‌ಸಿ ಅನುದಾನ 22 ಲಕ್ಷ ರೂ., 15ನೇ ಹಣಕಾಸು ಯೋಜನೆ ಅನುದಾನ 93 ಲಕ್ಷ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 1.26 ಕೋಟಿ ರೂ., ಎಸ್‌ಎಫ್‌ಸಿ ವೇತನ ಅನುದಾನ 89 ಲಕ್ಷ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 22 ಲಕ್ಷ ರೂ. ಹಂಚಿಕೆಯಾಗಿದೆ ಎಂದರು.
ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಬಜೆಟ್‌ನಲ್ಲಿ 385 ಕೋಟಿ ರೂ. ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಪಾವತಿಸಲಾಗಿದೆ. ಆ ಪೈಕಿ ಘನತ್ಯಾಜ್ಯ ವಸ್ತು ನಿರ್ವಹಣೆಗೆ 55 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 20 ಲಕ್ಷ ರೂ., ಬೀದಿ ದೀಪ ಹಾಗೂ ನೀರು ಸರಬರಾಜಿನ ವಿದ್ಯುಚ್ಛಕ್ತಿ ಬಿಲ್ ಪಾವತಿಗೆ 60 ಲಕ್ಷ ರೂ., ಕಾಯಂ ನೌಕರರ ವೇತನಕ್ಕೆ 89 ಲಕ್ಷ ರೂ. ಹಾಗೂ ಇನ್ನಿತರ ಕಾಮಗಾರಿಗಳಿಗೆ ಅನುದಾನ ಪಾವತಿಸಲಾಗಿದೆ ಎಂದು ವಿವರಿಸಿದರು.
ಪಟ್ಟಣದ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಎಸ್.ಎಲ್.ರಾಜಣ್ಣ, ಹೇಮಾವತಿ ರಮೇಶ್, ಶ್ರೀನಿವಾಸ್, ಶಿವಕುಮಾರ್, ಚಲುವಕೃಷ್ಣ, ಸಣ್ಣತಾಯಮ್ಮ, ಚೈತ್ರಾಸ್ವಾಮಿ, ನಾಮನಿರ್ದೇಶಿತ ಸದಸ್ಯ ರಂಗಸ್ವಾಮಿ, ಎನ್.ಎಸ್.ಪ್ರತಾಪ್, ನಾರಾಯಣ, ಮುಖ್ಯಾಧಿಕಾರಿ ಸುರೇಶ್ ಹಾಜರಿದ್ದರು.