ಸರಗೂರಿನ ವಿವಿಧೆಡೆ ತಂಪೆರೆದ ಮಳೆ

09 SARAG 2
Published on

ಸರಗೂರು: ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮನೆ ಕುಸಿದಿದೆ. ರಸ್ತೆಗೆ ಹಾನಿಯಾಗಿದೆ. ವಿದ್ಯುತ್ ಸರಬರಾಜು ಮಾರ್ಗಗಳಿಗೆ ಅಡಚಣೆಯಾಗಿದೆ. ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಹೆಗ್ಗುಡಿಲು ಗ್ರಾಮದ ಬಿಳಿನಾಯಕ ಎಂಬುವರು ಮನೆಯ ಮಂಗಳವಾರ ರಾತ್ರಿ ಮರ ಬಿದ್ದಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬದ ತಂತಿ ತುಂಡಾಗಿ ಬಿದ್ದು ವಿದ್ಯುತ್ ಸರಬರಾಜಿಗೆ ಅಡಚಣೆಯಾಗಿದೆ. ಮನೆಯಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೋರಾದ ಗಾಳಿ, ಗುಡುಗಿನೊಂದಿಗೆ ಅಬ್ಬರಿಸಿದ ಮಳೆಯಿಂದಾಗಿ ತಾಲೂಕಿನ ಹಲವೆಡೆ ಮರಗಳು ಬಿದ್ದ ವರದಿಯಾಗಿದೆ. ಕೆಲವೆಡೆ ಹಳೆಯ ಮನೆಗಳು ಕುಸಿದಿವೆ. ಕೆಲವು ಮನೆಯ ಹೆಂಚು, ಶೀಟು ಹಾರಿಹೋಗಿವೆ.ರಸ್ತೆ ಮೇಲೆ ಮಳೆ ನೀರು ನುಗ್ಗಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹಾನಿಯಾದ ಸ್ಥಳಕ್ಕೆ ಬುಧವಾರ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net