

ಸರಗೂರು: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದವರನ್ನು ಪತ್ತೆಹಚ್ಚಿ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಅತಿಥಿಗೃಹದಿಂದ ಹೊರಟ ಮೆರವಣಿಗೆ, ತಾಲೂಕು ಕಚೇರಿಗೆ ತಲುಪಿ ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಸ್ವತಂತ್ರವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ. ಧರ್ಮಸ್ಥಳ ಹಾಗೂ ಮಣಿಪುರದ ಘಟನೆ ಖಂಡನೀಯ. ಇಂತಹ ಘಟನೆಗಳು ಮರುಕಳಿಸಬಾರದೆಂದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.
ಆದಿಕರ್ನಾಟಕ ಮಹಾಸಭಾ ಗೌರವಾಧ್ಯಕ್ಷ ಬಸವರಾಜು, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಇಂದಿಯಪ್ಪ, ದಸಂಸ ಜಿಲ್ಲಾ ಸಂಚಾಲಕರು ರಾಜಶೇಖರ್, ತಾಲೂಕು ಸಂಚಾಲಕರು ಲಂಕೆ ಲಕ್ಷ್ಮಣ್, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೀರ್ವಾಳ್ ಬಸವರಾಜು, ಮುಖಂಡರಾದ ಮಹೇಂದ್ರ, ಶಂಕರ್, ಚಿನ್ನಯ್ಯ, ಸಿದ್ದರಾಜು, ಸರಗೂರು ಕೃಷ್ಣ, ಬಿಡಗಲು ಶಿವಣ್ಣ, ಗೋಪಾಲ್, ಸಣ್ಣಸ್ವಾಮಿ, ಗಣೇಶ್, ರಂಗಸ್ವಾಮಿ ಇತರರಿದ್ದರು.