

ಕಲಬುರಗಿ: ಕಳೆದೊಂದು ವರ್ಷದಲ್ಲಿ ಮನೆ, ಸರಗಳ್ಳತನ, ಸುಲಿಗೆ ಸೇರಿ 179 ಪ್ರಕರಣಗಳ ಪೈಕಿ 59 ಪತ್ತೆ ಮಾಡಿದ ನಗರ ಪೊಲೀಸರು 47 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಸೋಮವಾರ ಹಸ್ತಾಂತರಿಸುವ ಮೂಲಕ ಗಮನ ಸೆಳೆಯುವ ಕಾರ್ಯ ಮಾಡಿದರು.
ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಳವಿನ ಸ್ವತ್ತು ಮರಳಿಸುವ ಕಾರ್ಯಕ್ರಮದಲ್ಲಿ ಆಯುಕ್ತ ಎನ್. ಸತೀಶಕುಮಾರ್, ಡಿಸಿಪಿ ಕಿಶೋರಬಾಬು, ಕ್ರೈಂ ಡಿಸಿಪಿ ಶ್ರೀಕಾಂತ, ಎಸಿಪಿಗಳಾದ ಜೆ.ಎಚ್. ಇನಾಮದಾರ, ವಿಜಯಕುಮಾರ, ಎಸ್.ಬಿ.ಗಿರೀಶ ಇತರರ ಜತೆ ವಿವಿಧ ಪ್ರಕರಣಗಳಲ್ಲಿ ಪತ್ತೆ ಮಾಡಿರುವ ಚಿನ್ನಾಭರಣಗಳನ್ನು ವಾರಸುದಾರರಿಗೆ ನೀಡಿದರು.
ಬಳಿಕ ಆಯುಕ್ತ ಸತೀಶಕುಮಾರ್ ಸುದ್ದಿಗಾರರ ಜತೆ ಮಾತನಾಡಿ, ಕೆಲದಿನ ಹಿಂದಷ್ಟೆ 42 ಲಕ್ಷದ ಸ್ವತ್ತುಗಳನ್ನು ಮಾಲೀಕರಿಗೆ ಮರಳಿಸಲಾಗಿದೆ. ಇಂದು ಮತ್ತೆ ಸುಮಾರು 47 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು, ಬೈಕ್ ಮೊದಲಾದವುಗಳನ್ನು ಕಳೆದುಕೊಂಡವರಿಗೆ ಮರಳಿ ನೀಡಲಾಗಿದೆ ಎಂದರು.
ನಗರದ ವಿವಿಧೆಡೆ ವ್ಯವಸ್ಥಿತವಾಗಿ ಸರಗಳ್ಳತನ ಮಾಡಿದ ಆರು ಜನರ ಗ್ಯಾಂಗ್ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಅನುಮತಿ ಕೋರಿ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಚೌಕ್ ಪೊಲೀಸರು ಇಂತಹ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಲಾಕ್ಡೌನ್ ವೇಳೆ ಮಹಾರಾಷ್ಟ್ರದಿಂದ ಬಂದ ಇಬ್ಬರು ಸೇರಿ ಕಲಬುರಗಿ, ಕಮಲಾಪುರ ಇತರ ಕಡೆಯವರು ಸಂಚು ರೂಪಿಸಿ ಸರಗಳ್ಳತನ ಮಾಡಿದ್ದು. ಇವರ ವಿರುದ್ಧ ಕೋಕಾ ಪ್ರಯೋಗಿಸಲಾಗುವುದು. ಪ್ರಮುಖ ಆರೋಪಿ ಪತ್ತೆಗೆ ಜಾಲ ಬೀಸಲಾಗಿದೆ ಎಂದರು.
ಎ ಮತ್ತು ಬಿ ಉಪ ವಿಭಾಗದಲ್ಲಿ ತಲಾ 12 ಮತ್ತು ಸಿ ಉಪ ವಿಭಾಗದಲ್ಲಿ 35 ಕೇಸ್ ಭೇದಿಸಿದ್ದು, ಎಸಿಪಿಗಳಾದ ಇನಾಮದಾರ, ವಿಜಯಕುಮಾರ, ಗಿರೀಶ, ಇನ್ಸ್ಪೆಕ್ಟರ್ ಶಿವಾನಂದ ಗಾಣಿಗೇರ ಮತ್ತು ತಂಡದವರು ಮಾದರಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕರೊನಾ ಹಾವಳಿಯಿಂದಾಗಿ ನಾಲ್ಕೈದು ತಿಂಗಳು ಪೊಲೀಸರು ಬಂದೋಬಸ್ತ್ ಇತರ ಕೆಲಸಗಳಲ್ಲಿ ತೊಡಗಿದ್ದರಿಂದ ಕೆಲವರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಿಂದಾಗಿ ಪತ್ತೆ ಮಾಡುವ ಕೆಲಸ ಕೊಂಚ ವಿಳಂಬವಾಯಿತು ಎಂದು ಹೇಳಿದರು.
ಇನ್ಸ್ಪೆಕ್ಟರ್ಗಳಾದ ಶಿವಾನಂದ ಗಾಣಿಗೇರ, ಎಸ್.ಆರ್. ನಾಯ್ಕ, ಕಪಿಲದೇವ, ವಾಲೀಕಾರ, ಎಲ್.ಎಚ್. ಗೌಂಡಿ, ಅರುಣಕುಮಾರ ಮುರಗೊಂಡಿ, ಪಂಡಿತ ಸಗರ, ಸೋಮಲಿಂಗ ಕಿರದಳ್ಳಿ ಇತರರಿದ್ದರು. 59 ಜನರು ತಾವು ಕಳೆದುಕೊಂಡಿದ್ದ ವಸ್ತುಗಳನ್ನು ಪೊಲೀಸರಿಂದ ಪಡೆದುಕೊಂಡರು.
ತಾಯಿ ತೀರಿಕೊಂಡಿದ್ದರಿಂದ ಎಲ್ಲರೂ ಊರಿಗೆ ಹೋಗಿದ್ದೇವು. ಸಾಯಿ ಮಂದಿರ ಬಳಿಯ ತಮ್ಮ ಮನೆ ಬೀಗ ಮರಿದು ಚಿನ್ನಾಭರಣ, ನಗದನ್ನು ಕಳ್ಳರು ದೋಚಿದ್ದರು. ವಿವಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸ್ವತ್ತು ಹಸ್ತಾಂತರಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.
| ನಾಗನಾಥರಾವ ಕುಲಕರ್ಣಿ
ಸಾಯಿ ಮಂದಿರ ಪ್ರದೇಶದ ನಿವಾಸಿ
ಕೆಲಸ ಮಗಿಸಿ ಮೊಪೆಡ್ನಲ್ಲಿ ಮನೆಗೆ ಹೋಗುತ್ತಿರುವಾಗ ಬೈಕ್ನಲ್ಲಿ ಬಂದವರು ನನ್ನ ಕೊರಳಲ್ಲಿನ ಸರ ಕಿತ್ತುಕೊಂಡು ಹೋದರು. ನಾನು ಸ್ವಲ್ಪ ಹೊತ್ತು ಬೆನ್ನಟ್ಟಿದರೂ ಪ್ರಯೋಜನವಾಗಲಿಲ್ಲ. ಪೊಲೀಸರಿಗೆ ದೂರು ನೀಡಿದ್ದೆ, ಚೌಕ್ ಪೊಲೀಸರು ಪತ್ತೆ ಮಾಡಿ ಎರಡೂವರೆ ತೊಲ ಸರ ಮರಳಿಸಿದ್ದರಿಂದ ಖುಷಿಯಾಗಿದೆ.
| ಸುವರ್ಣ ಶಿರೂರ
ಆಳಂದ ಚೆಕ್ಪೋಸ್ಟ್ ಪ್ರದೇಶ ನಿವಾಸಿ