ಸರಗಳ್ಳನಿಗೆ ಬೆದರಿಸಿದ ದಿಟ್ಟ ಮಹಿಳೆ

chain snachar.
Published on

ಹುಬ್ಬಳ್ಳಿ: ಮಹಿಳೆಯೊಬ್ಬರ ಕೊರಳಿಗೆ ಕೈಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ ಕಳ್ಳರನ್ನು ಬೆದರಿಸಿ ಕಳುಹಿಸಿರುವ ಘಟನೆ ಇಲ್ಲಿನ ನವನಗರದ ಎಂಐಜಿ 2ನೇ ಕ್ರಾಸ್​ನಲ್ಲಿ ಸೋಮವಾರ ಸಂಜೆ ನಡೆದಿದೆ. ಮಹಿಳೆಯ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಚೇರಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಮಹಿಳೆ ನಡೆದುಕೊಂಡು ಹೊರಟಿದ್ದರು. ಎದುರಿಗೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಅದರಲ್ಲಿದ್ದ ಹಿಂಬದಿ ಸವಾರ ಏಕಾಏಕಿ ಮಹಿಳೆಯ ಕೊರಳಿಗೆ ಕೈಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಕೂಡಲೆ ಎಚ್ಚೆತ್ತುಕೊಂಡ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಆತನ ಕೈಯಿಂದ ಸರ ಬಿಡಿಸಿಕೊಂಡು, ಕಳ್ಳರನ್ನೇ ಹಿಡಿಯಲು ಯತ್ನಿಸಿ, ಜೋರಾಗಿ ಕೂಗಿದರು. ತಕ್ಷಣ ಕಳ್ಳರು ಪರಾರಿಯಾಗಿದ್ದಾರೆ. ಈ ಕುರಿತು ಎಪಿಎಂಸಿ- ನವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಮಹಿಳೆಯ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಖದೀಮರನ್ನು ಮಟ್ಟ ಹಾಕಿ: ಲಾಕ್​ಡೌನ್ ಬಳಿಕ ಕಣ್ಮರೆಯಾಗಿದ್ದ ಸರಗಳ್ಳರು ಮತ್ತೆ ಸಕ್ರಿಯರಾಗಿದ್ದಾರೆ. ಹಾಡಹಗಲೆ ಮಹಿಳೆಯರು, ಮಕ್ಕಳು, ವೃದ್ಧರನ್ನು ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡುವ ಖತರ್ನಾಕ್ ಸರಗಳ್ಳರ ಗ್ಯಾಂಗ್ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಅವಳಿ ನಗರ ಪೊಲೀಸರು ಸರಗಳ್ಳರ ಹಾವಳಿಗೆ ಬ್ರೇಕ್ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net