

ಮೈಸೂರು: ನಗರದ ಅಶೋಕರಸ್ತೆಯ ದೀಪಾ ಚಿನ್ನದ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ದೋಚಿರುವ ಪ್ರಕರಣದಲ್ಲಿ ಇರಾನಿ ಗ್ಯಾಂಗ್‌ನ ಕೈವಾಡ ಇರುವ ಕುರಿತು ಶಂಕೆ ವ್ಯಕ್ತವಾಗಿದೆ.
ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ 50 ರಿಂದ 55 ವರ್ಷದ ವ್ಯಕ್ತಿ ಈ ಅಂಗಡಿಗೆ ಬಂದಿದ್ದು, ಈ ಸಂದರ್ಭದಲ್ಲಿ ಅಲ್ಲಿ ಮಾಲೀಕರ ಗಮನವನ್ನು ಬೇರೆ ಕಡೆಗೆ ಸೆಳೆದು 105 ಗ್ರಾಂ ತೂಕದ 6 ಚಿನ್ನದ ಸರ ದೋಚಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಂಗಡಿ ಹೊರಗೆ ವ್ಯಕ್ತಿಯೊಬ್ಬ ಬೈಕ್ ಮೇಲೆ ಕಾಯುತ್ತ ನಿಂತುಕೊಂಡಿದ್ದ. ಚಿನ್ನ ದೋಚಿದ ಬಳಿಕ ಈ ಬೈಕ್‌ನಲ್ಲೇ ಆರೋಪಿ ಪರಾರಿಯಾಗಿದ್ದಾನೆ. ಇದು ವ್ಯವಸ್ಥಿತ, ಯೋಜಿತ ದುಷ್ಕೃತ್ಯವಾಗಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಮೂಲದ ಇರಾನಿ ಗ್ಯಾಂಗ್ ಈ ಕೃತ್ಯವನ್ನು ಎಸಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಅಂಗಡಿಯ ಮಾಲೀಕ ರತನ್ ಲಾಲ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆಯ ಪೊಲೀಸರು, ಈ ಆಯಾಮದಲ್ಲಿ ತನಿಖೆಯನ್ನೂ ಕೈಗೊಂಡಿದ್ದಾರೆ. ಆರೋಪಿ ಸ್ಪಷ್ಟವಾಗಿ ಹಿಂದಿ ಭಾಷೆ ಮಾತನಾಡಿರುವುದು ಈ ಅನುಮಾನವನ್ನು ಇನ್ನಷ್ಟು ಪುಷ್ಟಿಗೊಳಿಸಿದೆ.
ಕಳ್ಳತನ, ದರೋಡೆ ಮತ್ತು ಸರಗಳ್ಳತನದಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಸಂಘಟಿತ ಅಪರಾಧ ಗುಂಪು ಆಗಿ ‘ಇರಾನಿ ಗ್ಯಾಂಗ್’ ಕುಖ್ಯಾತಿ ಪಡೆದಿದೆ. ಈ ಗುಂಪು ಸಾಮಾನ್ಯವಾಗಿ ವಿವಿಧ ರೀತಿಯ ವೇಷಭೂಷಣ ಧರಿಸಿ, ಕಳ್ಳತನ ಮಾಡಲು ಮತ್ತು ವಿಶ್ವಾಸ ಗಳಿಸಲು ಪ್ರಯತ್ನಿಸುತ್ತವೆ. ಈ ಪ್ರಕರಣದಲ್ಲೂ ಇದು ಹೊಲಿಕೆಯಾಗುತ್ತಿದೆ.