ಸರಕು ಸಾಗಣೆಗೆ ಆಂಬುಲೆನ್ಸ್ ಬಳಕೆ

22 Nela Ph 3 Ambulence
Published on

ವಿಜಯವಾಣಿಸುದ್ದಿಜಾಲ ನೆಲಮಂಗಲ
ಗರ್ಭಿಣಿಯರು, ತಾಯಿ ಮಕ್ಕಳ ಆರೈಕೆಗಿರುವ ಉಚಿತ ನಗು-ಮಗು ಆಂಬುಲೆನ್ಸ್ ಅನ್ನು ಕಚೇರಿ ವಸ್ತುಗಳ ಸಾಗಾಟಕ್ಕೆ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ನಗರಸಭೆ ವ್ಯಾಪ್ತಿಯ ಹೊನ್ನಗಂಗಯ್ಯಪಾಳ್ಯದಲ್ಲಿ ಆರೋಗ್ಯ ಇಲಾಖೆ ನಿರ್ಮಿಸಿದ್ದ ನಮ್ಮ ಕ್ಲಿನಿಕ್ ಉದ್ಘಾಟನೆ ವೇಳೆ ಆರೋಗ್ಯಾಧಿಕಾರಿ ಕಚೇರಿಯಿಂದ ಕುರ್ಚಿ ಹಾಗೂ ವಿವಿಧ ವಸ್ತುಗಳನ್ನು ತರಲು ನಗರದ ಸಾರ್ವಜನಿಕ ಆಸ್ಪತ್ರೆಯ ನಗು-ಮಗು ಆಂಬುಲೆನ್ಸ್ ಬಳಕೆ ಮಾಡಿಕೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ನಾಗರಿಕರಿಗೆ ನೆರವಾಗಬೇಕಿದ್ದ ವಾಹನವನ್ನು ಆಸ್ಪತ್ರೆ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗರ್ಭಿಣಿ-ಬಾಣಂತಿಯರ ಸೇವೆಗಾಗಿ ನಗು-ಮಗು ತುರ್ತು ಚಿಕಿತ್ಸಾ ವಾಹನವನ್ನು ಆಸ್ಪತ್ರೆ ಸಿಬ್ಬಂದಿ ಸರಕು ಸಾಗಣೆಗೆ ಬಳಸಿದ್ದರಿಂದ ಸೀಟ್ ಕವರ್, ಸ್ಟ್ರೆಚರ್ ಹಾಳಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮುಖಂಡ ಬರದಿ ಪುರುಷೋತ್ತಮ್ ಒತ್ತಾಯಿಸಿದರು.
ಆಂಬುಲೆನ್ಸ್ ಅನ್ನು ರೋಗಿಗಳಿಗೆ ತೊಂದರೆ ಆಗದಂತೆ ನಿರ್ವಹಿಸಿದ್ದೇವೆ. 10 ನಿಮಿಷವಷ್ಟೇ ಕ್ಲಿನಿಕ್ ಉದ್ಘಾಟನೆಗಾಗಿ ಕಚೇರಿಯಿಂದ ಚೇರ್ ಸೇರಿ ಕೆಲ ವಸ್ತುಗಳ ಸಾಗಾಟಕ್ಕೆ ಬಳಸಿದ್ದು, ಆಂಬುಲೆನ್ಸ್‌ನಲ್ಲಿ ತುಂಬಿದ್ದ ಚೇರ್ ತೂಕದಿಂದ ಸ್ಟ್ರೆಚರ್ ಮುರಿದಿಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಹೇಮಾವತಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net