ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

21 HANUR 2
Published on

ಚಾಮರಾನಗರ: ಅರ್ಹರು ಅಗತ್ಯ ದಾಖಲೆಯನ್ನು ಸಲ್ಲಿಸುವುದರ ಮೂಲಕ ಸರ್ಕಾರದಿಂದ ಸಿಗುವ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಗ್ರೇಡ್- 2 ತಹಸೀಲ್ದಾರ್ ಧನಂಜಯ ತಿಳಿಸಿದರು.


ಹನೂರು ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಸಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದಿಂದ ಮಾಸಿಕ ಪಿಂಚಣಿಯನ್ನು ಪಡೆಯಬಹುದಾಗಿದೆ. ಇದರ ಸೌಕರ್ಯವನ್ನು ಪಡೆಯದ ಅರ್ಹರು ಕೂಡಲೇ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಯನ್ನು ನೀಡುವುದರ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಜೀವನೋಪಾಯಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ಇದೇ ವೇಳೆ 6 ಫಲಾನುಭವಿಗಳು ವಯಸ್ಸಿನ ಆಧಾರದ ಮೇಲೆ ಪಿಂಚಣಿ ಹಣವನ್ನು ಹೆಚ್ಚಿಸುವಂತೆ ಅರ್ಜಿ ಸಲ್ಲಿಸಿದರು. ಇದಕ್ಕೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 24 ಅರ್ಜಿಗಳು ಸಲ್ಲಿಕೆಯಾದವು. ಕೆಲವರಿಗೆ ಸ್ಥಳದಲ್ಲೇ ಪಿಂಚಣಿ ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಉಮಾ, ಸದಸ್ಯರಾದ ಕನಕರಾಜು, ಸಿ. ಪ್ರಭು, ಶಿರಸ್ತೇದಾರ್ ನಾಗೇಂದ್ರ, ಪ್ರಭಾರ ಆರ್‌ಐ ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ವಾಸುದೇವ, ಹೇಮಾ, ಗ್ರಾಮಸ್ಥರಾದ ಮರಿಸ್ವಾಮಿ, ವೀರಭದ್ರಯ್ಯ, ಪುಟ್ಟಸ್ವಾಮಿ, ಕಾಳಯ್ಯ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net