ಸರ್ಕಾರ ಸಂಭ್ರಮಾಚರಣೆ ಬದಲು ಶೋಕಾಚರಣೆ ಮಾಡಲಿ

mdl 29-1
ಮುಧೋಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗಣ್ಣ ಕಾತರಕಿ ಮಾತನಾಡಿದರು. ನಾಗಪ್ಪ ಅಂಬಿ, ಡಾ.ರವಿ ನಂದಗಾಂವ, ಶ್ರೀಶೈಲ ಚಿನ್ನಣ್ಣವರ, ರುದ್ರಪ್ಪ ಅಡವಿ ಇದ್ದರು.
Published on

ಮುಧೋಳ: ರಾಜ್ಯ ಸರ್ಕಾರ ಒಂದು ವರ್ಷ ಆಡಳಿತ ಪೂರೈಸಿ ಸಂಭ್ರಮಾಚರಣೆಯಲ್ಲಿದೆ. ಆದರೆ, ವರ್ಷದಿಂದ ಅಭಿವೃದ್ಧಿ ಕಾರ್ಯಗಳಿಲ್ಲದೆ ಶೂನ್ಯ ಸಾಧನೆ ಆಗಿದೆ. ಆದ್ದರಿಂದ ಸರ್ಕಾರ ಶೋಕಾಚರಣೆ ಆಚರಿಸುವುದು ಉತ್ತಮ ಎಂದು ಮುಧೋಳ ಗ್ರಾಮೀಣ ಮಂಡಳದ ಅಧ್ಯಕ್ಷ ಸಂಗಣ್ಣ ಕಾತರಕಿ ದೂರಿದರು.

ನಗರದ ಕಾನಿಪ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಮುಧೋಳ ಮತಕ್ಷೇತ್ರಕ್ಕೆ ಇಲ್ಲಿಯವರೆಗೂ ನೈಯಾ ಪೈಸೆ ಅನುದಾನ ಬಂದಿಲ್ಲ. ಹಿಂದಿನ ಸಚಿವ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಂದ ಅನುದಾನದಲ್ಲಿನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತ ಸಾಗಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಇಲ್ಲಿಯವರೆಗೂ ಸಚಿವ ಆರ್.ಬಿ. ತಿಮ್ಮಾಪುರ ಮುಧೋಳ ಮೀಸಲು ಮತಕ್ಷೇತಕ್ಕೆ ಎಷ್ಟು ಅನುದಾನ ತಂದಿದ್ದಾರೆಂದು ಅಂಕಿ ಅಂಶಗಳ ಸಮೇತ ಕ್ಷೇತ್ರದ ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರನ್ನ ಸಕ್ಕರೆ ಕಾರ್ಖಾನೆ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ವಾಗ್ದಾನ ಮಾಡಿದ್ದ ಸಚಿವ ತಿಮಾಪುರ, ಇಲ್ಲಿಯವರೆಗೂ ಯಾವುದೇ ಚಕಾರ ಎತ್ತಿಲ್ಲ. ಇದರಿಂದ ರನ್ನ ಕಾರ್ಖಾನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲವೆಂದು ಅವರು ಒಪ್ಪಿಕೊಂಡಂತಾಗುತ್ತದೆ ಎಂದರು.

ನಗರ ಮಂಡಳದ ಅಧ್ಯಕ್ಷ ಕರಬಸಯ್ಯ ಹಿರೇಮಠ ಮಾತನಾಡಿ, ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷವಾದರೂ ಇಲ್ಲಿಯವರೆಗೂ ನಗರಸಭೆಗೆ ಯಾವುದೇ ಅನುದಾನ ಬಂದಿಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ಸ್ವಚ್ಛತೆಗೆ ನಗರಸಭೆ ಗುರುಪಾದ ಕುಳಲಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿಗಳಿಂದ ಸ್ವಚ್ಛತೆಗಾಗಿ ಪ್ರಶಸ್ತಿ ಪಡೆದಿತ್ತು. ಆದರೆ, ಈಗ ಮುಧೋಳದಲ್ಲಿ ಸ್ವಚ್ಛತೆಯೇ ಇಲ್ಲವಾಗಿದೆ ಎಂದು ಆರೋಪಿಸಿದರು.

ಮೀನುಗಾರರ ರಾಜ್ಯ ಪ್ರಕೋಷ್ಠದ ಸಂಚಾಲಕ ನಾಗಪ್ಪ ಅಂಬಿ ಮಾತನಾಡಿ, ಮೀನುಗಾರರಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಸಾಲ ಸೌಲಭ್ಯ ನೀಡಿಲ್ಲ. ರೈತ ವಿದ್ಯಾನಿಧಿ ಬಂದಾಗಿದೆ. ರೈತರಿಗೆ ಕೃಷಿ ಸಲಕರಣೆ ನೀಡಿಲ್ಲ. ರೈತರ ಬದುಕು ಕಷ್ಟಕರವಾಗಿದೆ ಎಂದರು.
ಡಾ. ರವಿ ನಂದಗಾಂವ, ಶ್ರೀಶೈಲ ಚಿನ್ನಣ್ಣವರ, ರುದ್ರಪ್ಪ ಅಡವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net