

ಮೈಸೂರು: ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಮೈಸೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆಡಳಿತ ಯಂತ್ರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿಕೊಡಲು ಅನುಕೂಲವಾಗುವಂತೆ ಲೋಕಾಯುಕ್ತ ಸಂಸ್ಥೆಯ ಎಲ್ಲ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಆಗಿಂದಾಗ್ಗೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಗಮನಿಸಬೇಕು ಎಂದು ನಿರ್ದೇಶಿಸಿದರು.
ಹೆಚ್ಚು ಜನ ಸಂಪರ್ಕವಿರುವ ಸರ್ಕಾರಿ ಕಚೇರಿಗಳಾದ ಉಪನೋಂದಣಿ ಕಚೇರಿ, ಆರ್‌ಟಿಒ, ತಹಸೀಲ್ದಾರ್, ಕಂದಾಯ ನಿರೀಕ್ಷಕರ ಕಚೇರಿ, ಭೂಮಾಪನಾ ಇಲಾಖೆ, ಪಾಲಿಕೆ ಸೇರಿದಂತೆ ಇತ್ಯಾದಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಬೇಕು. ಈ ಮೂಲಕ ಕಚೇರಿಯಲ್ಲಿ ಹಾಜರಿರುವ ಸಾರ್ವಜನಿಕರಿಂದ ಅಹವಾಲನ್ನು ಕೇಳಬೇಕು. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಅಧಿಕಾರಿಗಳಲ್ಲಿ ಕರ್ತವ್ಯ ನಿರ್ಲಕ್ಷ್ಯ, ದುರಾಡಳಿತ ಕಂಡು ಬಂದಲ್ಲಿ ಅಂತಹವರ ವಿರುದ್ಧ ಲೋಕಾಯುಕ್ತ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಅದಕ್ಕಾಗಿ ಅಗತ್ಯ ಮಾಹಿತಿ ದಾಖಲೆಯೊಂದಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯ ಕಚೇರಿ, ರೈತ ಸಂಪರ್ಕ ಕೇಂದ್ರ, ಎಪಿಎಂಸಿ ಇತ್ಯಾದಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸರ್ಕಾರಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪಿಎಚ್‌ಸಿ ಕೇಂದ್ರಗಳಿಗೆ ಭೇಟಿ ನೀಡಬೇಕು. ಅನಾರೋಗ್ಯದಿಂದ ನರಳುತ್ತಿರುವವರಿಗೆ ಸರ್ಕಾರದಿಂದ ಸಿಗಬೇಕಾದ ಔಷಧ ಸಕಾಲದಲ್ಲಿ ಸಿಗುತ್ತಿದೆಯೇ? ಆರೋಗ್ಯಕ್ಕೆ ಸಂಬಂಧಿಸಿದ ಇತರ ಪರೀಕ್ಷಾ ಸೌಲಭ್ಯಗಳ ಲಭ್ಯತೆಯನ್ನು ಗಮನಿಸಬೇಕು. ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲಾ, ಕಾಲೇಜು, ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳು ಸಕಾಲದಲ್ಲಿ ಉಪಯೋಗಕ್ಕೆ ಬರುತ್ತಿದೆಯೇ ಎಂಬುದನ್ನು ಗಮನಿಸಬೇಕು. ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗುತ್ತಿದೆಯೇ, ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಏನಾದರೂ ಕರ್ತವ್ಯ ಲೋಪಕಂಡು ಬಂದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.
ಕೆರೆ ಒತ್ತುವರಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದರು
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿ.ಜೆ.ಸಜೀತ್, ಪೊಲೀಸ್ ಉಪಾಧೀಕ್ಷಕರಾದ ವಿ.ಕೃಷ್ಣಯ್ಯ, ಎಸ್.ಕೆ.ಮಾಲತೀಶ್, ಪೊಲೀಸ್ ನಿರೀಕ್ಷಕರಾದ ಎಂ.ಜಯರತ್ನ, ಬಿ.ವಿ.ರೂಪಶ್ರೀ, ಪಿ.ಉಮೇಶ್ ಮತ್ತು ಎ.ರವಿಕುಮಾರ್ ಇದ್ದರು.