

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಗಸ್ಟ್ ಕೊನೇ ವಾರದಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ತಿಳಿಸಿದ್ದಾರೆ. ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಲೇಖಕಿ ಪ್ರಮೀಳಾ ಜಾನಪ್ಪಗೌಡ ಅವರು ಶಾಲೆಯಲ್ಲಿ ಓದಿದ್ದು ಕಡಿಮೆಯಾಗಿದ್ದು, ಜೀವನಾನುಭವದಿಂದ ಕಲಿತ್ತಿದ್ದು ಹೆಚ್ಚು. ಪ್ರಮೀಳಾ ಅವರಿಗೆ ಜಾನಪದ ತ್ರಿಪದಿ, ಶರಣ ವಚನಗಳ ಕಡೆ ಹೆಚ್ಚಿನ ಒಲವು ಇದೆ. ಅವರು `ಲೆಕ್ಕವಿಲ್ಲ ಗೆಜ್ಜೆ ಕುಣಿದಾಗ' ಕೃತಿ ಜನಮನ್ನಣೆ ಪಡೆದಿದೆ. ಬದುಕು ಸಾಗಲಿ, ನಿರ್ಧಾರ, ಮನುಜ, ಬರೆದೆನವ್ವ ಕವನ ಸೇರಿ ಒಂಬತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಗುಲ್ಬರ್ಗ ವಿವಿ ರಾಜ್ಯೋತ್ಸವ ಗೌರವ ಪುರಸ್ಕಾರ ಪಡೆದಿದ್ದಾರೆ. ಕಾದಂಬರಿಕಾರ್ತಿ, ಕಥೆಗಾರ್ತಿ, ಕವಯತ್ರಿಯೂ ಆಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಸ್ವಾಗತ ಸಮಿತಿ ಅಧ್ಯಕ್ಷರಾಗಿ ವಿನೋದ ಪಾಟೀಲ್ ಸರಡಗಿ, ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಕಲ್ಯಾಣಕರ್ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.