ಹನೂರು: ರಾಮಾಪುರದಲ್ಲಿ ಶನಿವಾರ ಆಯೋಜಿಸಿದ್ದ ಹನೂರು ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಶ್ರೀ ಮಹದೇಶ್ವರ ಸ್ವಾಮಿ ದೇಗುಲದ ಮುಂಭಾಗ ಚಾಲನೆ ನೀಡಿದರು.
ತೆರೆದ ವಾಹನದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸರ್ವಾಧ್ಯಕ್ಷ ಸು.ಬಸವರಾಜ ದೊಡ್ಡಟ್ಟಿ ಅವರನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಯಿತು.
ಮೆರವಣಿಗೆಯಲ್ಲಿ ವೀರಗಾಸೆ ಹಾಗೂ ಪೂಜಾ ಕುಣಿತ ಎಲ್ಲರ ಗಮನ ಸೆಳೆಯಿತು. ಕಲಾತಂಡಗಳು, ಕನ್ನಡಾಸಕ್ತರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕುಂಭಕಳಸವನ್ನು ಹೊತ್ತ ಹೆಣ್ಣು ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ವಾದ್ಯದ ತಾಳಕ್ಕೆ ತಕ್ಕಂತೆ ಮಾರಿ ಕುಣಿತ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್, ಕಾರ್ಯದರ್ಶಿ ಅಭಿಲಾಷ್, ಕಸಾಪ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸ ನಾಯ್ಡು, ಗ್ರಾಪಂ ಉಪಾಧ್ಯಕ್ಷ ಮುರುಗೇಶ್ ಇತರರು ಇದ್ದರು. ಇದಕ್ಕೂ ಮುನ್ನಾ ಕಲ್ಯಾಣ ಮಂಟಪದ ಆವರಣದಲ್ಲಿ ರಾಜಸ್ವ ನಿರೀಕ್ಷಕ ಶಿವಕುಮಾರ್ ರಾಷ್ಟ್ರ ಧ್ವಜ, ಕನ್ನಡಪರ ಹೋರಾಟಗಾರ ರಾಜಣ್ಣ ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ ನೆರವೇರಿಸಿದರು.