

ಹುಬ್ಬಳ್ಳಿ: ಶಾಸಕರನ್ನು ಎಚ್.ಡಿ. ಕುಮಾರಸ್ವಾಮಿ ಸರಿಯಾಗಿ ನೋಡಿಕೊಳ್ಳಲಿಲ್ಲ. ಅವರ ಕ್ಷೇತ್ರಕ್ಕೆ ಸಮರ್ಪಕವಾಗಿ ಅನುದಾನ ಕೊಡಲಿಲ್ಲ. ಹಾಗಾಗಿ ಸರ್ಕಾರ ಬೀಳಿಸಿದರು. ಕುಣಿಯೋದಕ್ಕೆ ಬಾರದವರು ನೆಲ ಡೊಂಕು ಎಂದಂತೆ ಈಗ ಮಾತಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರ ಬೀಳಲಿಕ್ಕೆ ಸಿದ್ದರಾಮಯ್ಯ ಕಾರಣ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಬೀಳಿಸಿದ್ದು ನಾನಲ್ಲ, ಅದಕ್ಕೆ ಕುಮಾರಸ್ವಾಮಿಯೇ ಕಾರಣ. ಅಷ್ಟಕ್ಕೂ ಚುನಾವಣೆ ಬಂದಾಗ ಈ ವಿಷಯ ಹೇಳುವ ಉದ್ದೇಶವೇನು? ಸಮ್ಮಿಶ್ರ ಸರ್ಕಾರ ಬೀಳಲು ಕಾರಣ ಸಿದ್ದರಾಮಯ್ಯ, ಡಿಕೆಶಿ ಎಂಬುದಕ್ಕೆ ಆಡಿಯೊ ದಾಖಲೆಗಳಿವೆ ಎಂದಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಬಿಜೆಪಿಯ ಆಂತರಿಕ ಸಂಘರ್ಷದಿಂದ ಸರ್ಕಾರ ಬಿದ್ದರೆ ನಾವು ಚುನಾವಣೆ ಎದುರಿಸಲು ಸಿದ್ಧ ಎಂದು ಹೇಳಿದರು.
ಪರಸ್ಪರ ಅಂತರ ಮಾಯ: ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಚೇರಿ ಹಾಗೂ ಖಾಸಗಿ ಹೋಟೆಲ್ಗೆ ಭೇಟಿ ನೀಡಿದ ವೇಳೆ ಕೈ ಕಾರ್ಯಕರ್ತರು ಆಗಮಿಸಿದ್ದರು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಪಾಲನೆಯಾಗಲಿಲ್ಲ. ಅನೇಕರು ಮಾಸ್ಕ್ ಕೂಡ ಧರಿಸಿರಲಿಲ್ಲ.
ನಾವೇ ಗೆಲ್ತೀವಿ: ಕರ್ನಾಟಕದ ಎರಡು ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಈ ಮೊದಲು ಪದವೀಧರರ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಈ ಸಲ ಪರಿಗಣಿಸಿ ವರ್ಷದ ಹಿಂದೆಯೇ ಅಭ್ಯರ್ಥಿಗಳನ್ನು ಘೊಷಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.