ಸಮೃದ್ಧಿ ತಂದುಕೊಟ್ಟ ಮಿಶ್ರ ಬೇಸಾಯ

12spt4
ಸಮೃದ್ಧವಾಗಿ ಬೆಳೆದಿರುವ ಶುಂಠಿ ಬೆಳೆ
Published on

ಸೋಮವಾರಪೇಟೆ: ಕಾಡಾನೆಗಳ ಕಾಟದ ನಡುವೆಯೂ ಶನಿವಾರಸಂತೆ ಸಮೀಪದ ಅಮ್ಮಳ್ಳಿ ಗ್ರಾಮದ ಕೃಷಿಕ ಬಿ.ಡಿ.ಮೋಹನ್ ಲಾಭ-ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ ಮಿಶ್ರ ಬೇಸಾಯ ಅನುಸರಿಸಿ ಯಶಸ್ಸು ಕಂಡಿದ್ದಾರೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ದುಪ್ಪಟ್ಟು ಕೂಲಿ, ಕೃಷಿ ಉಪಕರಣ, ಗೊಬ್ಬರ, ಕೀಟನಾಶಕಗಳ ಬೆಲೆ ಗಗನಕ್ಕೇರಿರುವುದರ ಜತೆಗೆ ಕೃಷಿ ಎಂಬುದು ನಷ್ಟ ಎಂದು ತಿಳಿದಿದ್ದರೂ, ಒಂದಲ್ಲ ಒಂದು ದಿನ ಭೂತಾಯಿ ಕೈಹಿಡಿದೇ ಹಿಡಿಯುತ್ತಾಳೆ ಎಂಬ ನಂಬಿಕೆಯಿಂದ ದುಡಿದ ಹಣವನ್ನು ಮಿಶ್ರ ಬೇಸಾಯಕ್ಕೆ ಸುರಿದು ಲಾಭ ಕಂಡಿದ್ದಾರೆ.

ಆರು ಎಕರೆ ಕೃಷಿ ಭೂಮಿಯಲ್ಲಿ ಕಾಫಿ, ಕಾಳುಮೆಣಸು, ಅಡಕೆ, ಜೋಳ, ಶುಂಠಿ, ಭತ್ತ, ಬಾಳೆ, ಕಿತ್ತಳೆ, ನಿಂಬೆ, ಸೇಬು ಸೇರಿದಂತೆ ಇತರ ತರಕಾರಿ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕೃಷಿ ಮಾಡುವವರಿಗೆ ಸಲಹೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಪತ್ನಿ, ಪುತ್ರ, ಪುತ್ರಿಗೂ ಕೃಷಿ ಎಂದರೆ ಅಚ್ಚುಮೆಚ್ಚು. ಹೀಗಾಗಿ ಕಾಲೇಜು ರಜಾ ದಿನಗಳಲ್ಲಿ ಕೃಷಿ ಭೂಮಿಯಲ್ಲೇ ಸಮಯ ಕಳೆಯುತ್ತಾರೆ.

ನಿಡ್ತ, ಗಂಗಾವರ ಮೀಸಲು ಅರಣ್ಯದ ಪಕ್ಕದಲ್ಲೇ ಅಮ್ಮಳ್ಳಿ ಗ್ರಾಮವಿದೆ. ಹಿಂದೆಲ್ಲ ಕಾಡುಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ರೈತರು ಪಡೆದುಕೊಳ್ಳುವಂತಹ ಪರಿಸ್ಥಿತಿ ಇತ್ತು. ಈ ಕಾರಣದಿಂದ ಭತ್ತ, ಜೋಳ ಮಾತ್ರ ಬೆಳೆಯುತ್ತಿದ್ದರು. ಕಾಡಾನೆಗಳು ಭತ್ತ ಗದ್ದೆಗೆ ದಾಳಿ ಮಾಡದಂತೆ ಮರದ ಮೇಲೆ ಅಟ್ಟಣಿಕೆ ಕಟ್ಟಿಕೊಂಡು ಪಹರೆ ಕಾಯ್ದು ಫಸಲನ್ನು ಉಳಿಸಿಕೊಳ್ಳುತ್ತಿದ್ದರು. ಇವೆಲ್ಲ ಕಾರಣದಿಂದ ಇತರ ಬೆಳೆಗಳ ಬಗ್ಗೆ ರೈತರು ಅಷ್ಟಾಗಿ ಆಸಕ್ತಿ ವಹಿಸಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಫಿ, ಕಾಳುಮೆಣಸು, ಅಡಕೆಗೆ ಬೆಲೆ ಜಾಸ್ತಿಯಾಗುತ್ತಿದ್ದಂತೆ ಪರ್ಯಾಯ ಬೆಳೆಗಳತ್ತ ಕೃಷಿಕ ಮೋಹನ್ ಚಿತ್ತ ಹರಿಯಿತು. ಮೊದಲು ಶುಂಠಿ ಕೃಷಿ ಮಾಡಿ, ಆ ಹಣವನ್ನು ಇತರ ಬೆಳೆ ಬೆಳೆಯಲು ವಿನಿಯೋಗಿಸಿದರು.

ಮೀಸಲು ಅರಣ್ಯದ ಸುತ್ತ ಸೋಲಾರ್ ಬೇಲಿ, ಆನೆ ಕಂದಕ ನಿರ್ಮಾಣ ಮಾಡಲಾಗಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಂತು. 4 ವರ್ಷದ ಹಿಂದೆ ಶಿವಮೊಗ್ಗ ಹಾಗು ಹಾಸನದ ಹುಲಿಕಲ್‌ನಿಂದ ಬೀಜದ ಅಡಿಕೆ ತಂದು ಬಿತ್ತನೆ ಮಾಡಿ, ಸಸಿಗಳನ್ನು ನೆಟ್ಟರು. ಶಿವಮೊಗ್ಗದ ಹೈಬ್ರೀಡ್ ತಳಿ ನಾಲ್ಕು ಅಡಿಯಲ್ಲೇ ಫಸಲು ಕೊಡಲು ಪ್ರಾರಂಭಿಸಿತು. ಹುಲಿಕಲ್ ತಳಿಯೂ ಹೊಂಬಾಳೆ ಬಿಡುತ್ತಿದ್ದು, ನೂರು ಅಡಿ ವೆರಗೂ ಬೆಳೆಯುತ್ತವೆ ಎಂದು ಮಾಹಿತಿ ನೀಡಿದರು.

ಅಡಿಕೆ ತೋಟದ ಒಳಗೆ ಜೋಳ ಬೆಳೆಯುವ ಇವರು, ಇನ್ನೊಂದು ಜಾಗದಲ್ಲಿ ಕಾಫಿ, ಕಾಳುಮೆಣಸು ಫಸಲು ಮಾಡುತ್ತಿದ್ದಾರೆ. ಪ್ರತಿ ವರ್ಷ ಶುಂಠಿಯನ್ನು ಬೆಳೆಯುವ ಇವರು, ಪ್ರಸಕ್ತವಾಗಿ ಎರಡು ಎಕರೆಯಲ್ಲಿ ಶುಂಠಿ ಬೆಳೆದಿದ್ದಾರೆ. ಬೆಳೆ ಸಮೃದ್ಧವಾಗಿದ್ದು, 60 ಕೆ.ಜಿ.ತೂಕದ ಚೀಲಕ್ಕೆ 12 ಸಾವಿರ ರೂ.ವರೆಗೂ ತಲುಪಿದೆ. ಶುಂಠಿ ಕೃಷಿ ಇತಿಹಾಸದಲ್ಲೇ ದೊಡ್ಡ ಮಟ್ಟದ ಬೆಲೆ ಇದಾಗಿದೆ.

ಸಾವಯವ ಕೃಷಿ ಪದ್ದತಿಗೆ ಹೆಚ್ಚಿನ ಆದ್ಯತೆ ನೀಡಿರುವ ಮೋಹನ್, ದನದ ಗೊಬ್ಬರ, ಕೋಳಿ ಗೊಬ್ಬರವನ್ನೂ ಬಳಸುತ್ತಾರೆ. ಅವಶ್ಯಕತೆ ಇದ್ದಾಗ ಸಿಲೀಂದ್ರನಾಶಕ, ಕೀಟನಾಶಕಗಳನ್ನೂ ಬಳಸುತ್ತಾರೆ. ಸಾವಯವ ಗೊಬ್ಬರ ಉಪಯೋಗಿಸಿರುವುದರಿಂದ ಉತ್ಪಾದನಾ ವೆಚ್ಚ ಒಂದಷ್ಟು ಕಡಿಮೆಯಿದೆ. ಬೋರ್‌ವೆಲ್, ಮೈಕ್ರೊಜೆಟ್‌ಗಳ ಮೂಲಕ ಅವಶ್ಯಕ ದಿನಗಳಲ್ಲಿ ಫಸಲಿಗೆ ನೀರು ಕೊಡಲಾಗುತ್ತದೆ ಎಂದು ವಿಜಯವಾಣಿಗೆ ತಿಳಿಸಿದರು.

ಮುಂಜಾನೆ 6ಗಂಟೆಗೆ ಮಗನೊಂದಿಗೆ ಗುದ್ದಲಿ ಹಿಡಿದು ಕೃಷಿ ಭೂಮಿಗೆ ತೆರಳುವ ಮೋಹನ್ ಬಹುತೇಕ ಕೆಲಸಗಳನ್ನು ಮಾಡುತ್ತಾರೆ. ಸಮಾಜಸೇವೆ, ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಇವರು, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿಯ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಅನುದಾನ ಕಲ್ಪಿಸಿದ್ದಾರೆ. ಮಗ ಮೋಹಿತ್ ಡಿಪ್ಲೊಮಾ ಓದುತ್ತಿದ್ದರೂ, ಕೃಷಿ ಕಡೆಗೆ ಹೆಚ್ಚಿನ ಆಸಕ್ತಿ ಇವರಿಗಿದೆ.

ಕಾಶ್ಮೀರದಲ್ಲಿ ಬೆಳೆಯುವ ಸೇಬನ್ನು ದಕ್ಷಿಣ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನಲ್ಲಿ ಬೆಳೆಯುವ ಪ್ರಯತ್ನಕ್ಕೆ ಮೋಹನ್ ಮುಂದಾಗಿದ್ದಾರೆ. ಈಗಾಗಲೇ 200 ಗಿಡಗಳನ್ನು ಹಾಕಿದ್ದು, ಫಸಲಿಗಾಗಿ ಎದುರು ನೋಡುತ್ತಿದ್ದಾರೆ. ಈ ವರ್ಷ 500 ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಅರೇಬಿಕಾ ಕಾಫಿಯನ್ನು ಬೆಳೆಯುತ್ತಿದ್ದ ಗ್ರಾಮದಲ್ಲಿ ಹೈಬ್ರೀಡ್ ಚಂದ್ರಗಿರಿ ತಳಿಯನ್ನು ಬೆಳೆದು ಎರಡು ವರ್ಷಕ್ಕೆ ಫಸಲು ತೆಗೆಯುತ್ತಿದ್ದಾರೆ. ಅರೇಬಿಕಾ ಕಾಫಿ ಫಸಲು ಪಡೆಯಲು 5 ವರ್ಷ ಬೇಕಾಗುತ್ತದೆ. ಒಟ್ಟಿನಲ್ಲಿ ಕೃಷಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮೋಹನ್, ಆರು ಎಕರೆ ಜಾಗದಲ್ಲಿ ಹತ್ತಾರು ಬೆಳೆಗಳನ್ನು ಬೆಳೆದು ಮಾದರಿ ರೈತ ಎನಿಸಿಕೊಂಡಿದ್ದಾರೆ.

ಕೈಕೆಸರಾದರೆ ಬಾಯಿ ಮೊಸರು ಎಂಬುದನ್ನು ನಾನು ನಂಬಿದ್ದೇನೆ. ಕೃಷಿಯನ್ನು ಇಷ್ಟುಪಟ್ಟು ಮಾಡಿದ್ದೇನೆ. ಉತ್ಪಾದನಾ ವೆಚ್ಚ ಜಾಸ್ತಿಯಾದರೂ, ಮುಂದೆ ಉತ್ತಮ ಆದಾಯ ನಿರೀಕ್ಷೆ ಇದೆ. ಏನೇ ಕಷ್ಟ ಬಂದರೂ ಕೃಷಿ ಕೈಬಿಡಬಾರದು. ಮಿಶ್ರ ಬೇಸಾಯ ಲಾಭದಾಯಕವಾಗಿದೆ. ರೈತ ಆಹಾರ ಉತ್ಪಾದನೆ ಮಾಡದಿದ್ದರೆ, ದೇಶದ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆ. ನಷ್ಟ ಅನುಭವಿಸಿದ ಸಂದರ್ಭ ಸಹಾಯಧನ ನೀಡಿ, ಪ್ರೋತ್ಸಾಹ ಮಾಡಬೇಕು. ಹೊಸ ಹೊಸ ತಳಿಯ ಸಂಶೋಧನೆ ಮಾಡಬೇಕು. ಕಾಫಿ ಬಿಳಿಕಾಂಡಕೊರಕ ಹಾವಳಿ ನಿಯಂತ್ರಣಕ್ಕೆ ಸೂಕ್ತ ಜೌಷಧವನ್ನು ಈವರೆಗೂ ಕಂಡು ಹಿಡಿದಿಲ್ಲ. ಈ ಕಾರಣದಿಂದ ಕಾಫಿ ತೋಟಗಳು ನಾಶವಾಗುತ್ತಿವೆ. ಒಂದೇ ಬೆಳೆಯನ್ನು ನಂಬಿದರೆ ಆರ್ಥಿಕ ಸಮಸ್ಯೆಯಾಗುತ್ತದೆ.
ಮೋಹನ್, ಪ್ರಗತಿಪರ ರೈ, ಅಮ್ಮಳ್ಳಿ ಗಾಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net