

ಕುಶಾಲನಗರ : ಸಂವಿಧಾನ ರಚನೆಯ ಉದ್ದೇಶವೇ ಸಮೃದ್ಧ ಭಾರತ ನಿರ್ಮಿಸುವುದು ಎಂದಾಗಿತ್ತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಹೇಳಿದರು.
ಕುಶಾಲನಗರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ವೈವಿಧ್ಯಮಯ ಚಿಂತನೆ, ಸಂಸ್ಕೃತಿ ಇರುವ ಭಾರತ ದೇಶದಲ್ಲಿ ವಿಭಿನ್ನವಾದ ಆಚರಣೆ ಇದೆ. ಜಾತಿ, ಮತ, ಆಚಾರ, ವಿಚಾರ, ಆಹಾರ, ಉಡುಪು ಇದ್ದರೂ ಕೂಡ ಅದನ್ನೆಲ್ಲ ಒಟ್ಟಾಗಿ ಕೊಂಡೊಯ್ಯುವ ಒಂದು ಶ್ರೇಷ್ಠ ಮಂತ್ರ ಘೋಷ ಸಂವಿಧಾನ. ಪರಸ್ಪರ ಹೊಂದಾಣಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿರುವ ಸಂವಿಧಾನವನ್ನು ಎಲ್ಲ ಅಧಿಕಾರಿಗಳು, ಸಾರ್ವಜನಿಕರಿಂದ ಓದಿಸುವ ಪರಿಕಲ್ಪನೆಯೇ ಅದ್ಬುತ ಎಂದು ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ಮಾತನಾಡಿದರು. ತಹಸೀಲ್ದಾರ್ ಕಿರಣ್ ಗೋರಯ್ಯ, ಆರ್‌ಎಫ್‌ಒ ಶಿವರಾಮ್, ಸಬ್ ರಿಜಿಸ್ಟ್ರಾರ್ ಅನೀತಾ ಮೋಸೆಸ್, ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ವಿವಿಧ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು.