ಸಮೃದ್ಧ ತೋಟ ಹಸಿರಿನ ನೋಟ

27Rajesh5
Published on

ಚಾಮರಾಜನಗರ: ಗಿಡದಲ್ಲಿ ತೂಗುತ್ತಿರುವ ಬಾಳೆ ಗೊನೆಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಿಶಿಣ, ಬನದಲ್ಲಿ ಕಾಯಿ ಕಟ್ಟಿರುವ ನಿಂಬೆ, ಬಳ್ಳಿ ಹಬ್ಬಿದ ವೀಳ್ಯದೆಲೆ, ನೆಲದಲ್ಲಿ ಹರಡಿಕೊಂಡಿರುವ ಸೊಪ್ಪು, ಎತ್ತರಕ್ಕೆ ಬೆಳೆಯುತ್ತಿರುವ ತೆಂಗು...

ಇದು ತಾಲೂಕಿನ ಹರದನಹಳ್ಳಿಯ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯ ಮತ್ತು 2010-11ನೇ ಸಾಲಿನ ಜಿಲ್ಲಾ ಮಟ್ಟದ ಪ್ರಗತಿ ಪರ ರೈತ ಪ್ರಶಸ್ತಿ ಪುರಸ್ಕೃತ ಎನ್.ಮಂಜುನಾಥ್ ಅವರ ತೋಟದ ನೋಟ. ಗ್ರಾಮದಲ್ಲಿರುವ ಒಟ್ಟು 3 ಎಕರೆ 15 ಗುಂಟೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಮುಕ್ಕಾಲು ಎಕರೆಯಲ್ಲಿ ಅಂಗಾಂಶ ಕೃಷಿ ಮಾಡಿದ ಬಾಳೆ, 1 ಎಕರೆಯಲ್ಲಿ ಅರಿಶಿಣ, ಇನ್ನು ಮುಕ್ಕಾಲು ಎಕರೆಯಲ್ಲಿ ನೇಂದ್ರ ಬಾಳೆ, 15 ಗುಂಟೆ ಜಾಗದಲ್ಲಿ ಅಂಬಾಡಿ, ನಾಟಿ ತಳಿಯ ವೀಳ್ಯದೆಲೆ, 10 ಗುಂಟೆಯಲ್ಲಿ ನಿಂಬೆ, 180 ತೆಂಗು ಬೆಳೆದಿದ್ದಾರೆ. ಎಲ್ಲ ಬೆಳೆಗಳೂ ಉತ್ತಮವಾಗಿವೆ. ರೋಗ-ರುಜಿನವಿಲ್ಲದೆ ಹಚ್ಚ ಹರಿಸಿರಿನಿಂದ ಕಂಗೊಳಿಸುತ್ತಿವೆ. ಗಾತ್ರದಲ್ಲಿ ಜೋರಾಗಿರುವ ಬಾಳೆ ಗೊನೆಗಳು ಗಿಡದ ಆರೋಗ್ಯವನ್ನು ತಿಳಿಸುತ್ತಿವೆ. ಚೆನ್ನಾಗಿ ಬೆಳೆದಿರುವ ಅರಿಶಿಣವೂ ಸಮೃದ್ಧಿಯ ಸಂಕೇತವಾಗಿ ಕಾಣುತ್ತಿದೆ. ವೀಳ್ಯದೆಲೆ, ನಿಂಬೆ ಮತ್ತು ಸೊಪ್ಪು, ತೆಂಗು, ಮೇವಿನ ಬೆಳೆ ಹೀಗೆ ಮಿಶ್ರ ಬೆಳೆಗಳು ವೈವಿಧ್ಯಮಯ ಬೇಸಾಯವನ್ನು ತಿಳಿಸುತ್ತಿವೆ. 1 ಬೋರ್‌ವೆಲ್ ಇದ್ದು, ಹನಿ ನೀರಾವರಿ ಮೂಲಕ ಬೆಳೆಗಳಿಗೆ ಜಲ ನೀಡುತ್ತಿದ್ದಾರೆ.

ಸಾವಯವ ವಿಧಾನ:

ರೈತ ಮಂಜುನಾಥ್ ಹಲವು ವರ್ಷಗಳ ಹಿಂದೆಯೇ ಸಾವಯವ ವಿಧಾನದಲ್ಲಿ ಕೃಷಿ ಮಾಡಲು ಶುರು ಮಾಡಿದರು. ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ಆರೋಗ್ಯಕರ ಆಹಾರವನ್ನು ಬೆಳೆಯಬಹುದು. ಇದರಿಂದ ಸಮಾಜದ ಆರೋಗ್ಯವೂ ಚೆನ್ನಾಗಿರುತ್ತದೆ. ಅಲ್ಲದೆ, ಮಣ್ಣು ಲವತ್ತಾಗಿದ್ದರೆ ಮಾತ್ರ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ ಎಂದು ಅರಿತು ಸಾವಯವ ವಿಧಾನವನ್ನು ಅಳವಡಿಸಿಕೊಂಡರು. ರಾಸಾಯನಿಕ ಗೊಬ್ಬರ, ಔಷಧಗಳನ್ನು ಹಾಕದೆ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಗಂಜಲ ಹಾಕುವುದು, ಜೀವಾಮೃತ, ಗೋ ಕೃಪಾಮೃತವನ್ನು ಹಾಕಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಎರಡು ಹಸುಗಳನ್ನು ಸಾಕಿದ್ದಾರೆ. ತೆಂಗಿನ ಗರಿ ಮತ್ತು ಇನ್ನಿತರ ತ್ಯಾಜ್ಯವನ್ನು ತೋಟದ ಮಣ್ಣಿನಲ್ಲೇ ಕೊಳೆಸುತ್ತಿದ್ದಾರೆ. ಕಳೆಯನ್ನು ಯಂತ್ರದ ಮೂಲಕ ತೆಗೆದು ಇದನ್ನೂ ಕೊಳೆಸಿ ಮಣ್ಣಿಗೆ ಸೇರುವಂತೆ ಮಾಡುತ್ತಿದ್ದಾರೆ. ಮಣ್ಣಿನಲ್ಲಿ ಎರೆಹುಳುಗಳ ವಾಸ ಲವತ್ತತೆಯನ್ನು ಹೆಚ್ಚಿಸುತ್ತಿದೆ. ತಿಪ್ಪೆಯಲ್ಲಿ ಸಂಗ್ರಹಿಸಿರುವ ಗೊಬ್ಬರ ಎರೆಹುಳುವಿನಿಂದ ಹದಗೊಂಡು ಮೃದುವಾಗಿದೆ. ಇದನ್ನು ಬೆಳೆಗಳಿಗೆ ಕೊಟ್ಟು ಬೆಳೆಸುತ್ತಿರುವುದರಿಂದ ಅವುಗಳ ಬೆಳವಣಿಗೆಯೂ ಚೆನ್ನಾಗಿದೆ.

ನಿಂಬಿಯ ಬನದೊಳಗೆ...:

10 ಗುಂಟೆಯಲ್ಲಿ ನೈಸರ್ಗಿಕ ಕೃಷಿ ವಿಧಾನದಲ್ಲಿ ನಿಂಬೆ ಬೆಳೆಯುತ್ತಿದ್ದಾರೆ. ಗಿಡಗಳಿಗೆ ನೀರನ್ನು ಬಿಟ್ಟರೆ ಬೇರೆ ಏನನ್ನೂ ಹಾಕುತ್ತಿಲ್ಲ. ನೈಸರ್ಗಿಕವಾಗಿ ಸಿಗುವ ಪೋಷಕಾಂಶಗಳನ್ನು ಬಳಸಿಕೊಂಡು ನಿಂಬೆ ಬೆಳೆಯುತ್ತಿದೆ. ರೋಗ ರುಜಿನ ಬಾಧಿಸುತ್ತಿಲ್ಲ. ದಪ್ಪ ಗಾತ್ರದ ನಿಂಬೆ ಹಣ್ಣು ಬೆಳೆದಿವೆ. ಇನ್ನು ವೀಳ್ಯದೆಲೆಯೂ ನೈಸರ್ಗಿಕವಾಗಿ ಬೆಳೆಯುತ್ತಿದೆ. ಹಬ್ಬಿದ ಬಳ್ಳಿಗಳಲ್ಲಿ ವೀಳ್ಯದೆಲೆ ಸೊಂಪಾಗಿ ಚಿಗುರುತ್ತಿದೆ. ಈಗಾಗಲೇ ಕಟಾವಿಗೆ ಬಂದಿರುವ ವೀಳ್ಯದೆಲೆ ಪಕ್ಕದ ಜಾಗದಲ್ಲಿ ಹೊಸದಾಗಿ ಮತ್ತೆ ವೀಳ್ಯದೆಲೆ ನೆಡಲಾಗಿದೆ. ಮನೆಗೆ ಬೇಕಾದ ಸೊಪ್ಪನ್ನು ಬೆಳೆದುಕೊಳ್ಳುತ್ತಿದ್ದಾರೆ.

ಕೃಷಿ ಜ್ಞಾನ ಕೊಟ್ಟ ತರಬೇತಿ:

ಕೃಷಿ ಬಳುವಳಿಯಾಗಿ ಬಂದಿರುವ ವೃತ್ತಿಯಾದರೂ ಕಲಿಕೆ ನಿರಂತರ ಪ್ರಕ್ರಿಯೆ. ಇದನ್ನು ಅರಿತಿರುವ ರೈತ ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯನಾಗಿ ಸಾರ್ವಜನಿಕರ ಕೆಲಸ ಕಾರ್ಯಗಳ ಒತ್ತಡವಿದ್ದರೂ ಕೃಷಿ ಜ್ಞಾನ ಹೆಚ್ಚಿಸಿಕೊಳ್ಳುವ ಆಸಕ್ತಿಯನ್ನು ಮಾತ್ರ ಕಡಿಮೆ ಮಾಡಿಲ್ಲ. ಹುಟ್ಟೂರು ಹರದನಹಳ್ಳಿ ಗ್ರಾಮದಲ್ಲೇ ಕೃಷಿ ವಿಜ್ಞಾನ ಕೇಂದ್ರವಿದೆ. ಇಲ್ಲಿ ರೈತರಿಗೆ ನೀಡುವ ಹಲವು ತರಬೇತಿಗಳಲ್ಲಿ ಮಂಜುನಾಥ್ ಭಾಗವಹಿಸಿದ್ದಾರೆ. ಕೃಷಿ ಬಗೆಗಿನ ಮಾಹಿತಿಗಳನ್ನು ತಿಳಿದುಕೊಂಡು ಅಳವಡಿಸಿಕೊಂಡಿದ್ದಾರೆ. ಬೇರೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪ್ರಾಯೋಗಿಕ ಅನುಭವನವನ್ನು ಸಂಗ್ರಹಿಸಿಕೊಂಡಿದ್ದಾರೆ.

ಅರಿಶಿಣ ಬೆಳೆಗಾರರ ಬಳಗ: ರೈತ ಮಂಜುನಾಥ್ ಮತ್ತು ಸಮಾನ ಮನಸ್ಕ ಅರಿಶಿಣ ಬೆಳೆಗಾರರು ಸೇರಿ ಕಾಮಧೇನು ಅರಿಶಿಣ ಬೆಳೆಗಾರರ ಸಂಘ ಸ್ಥಾಪನೆ ಮಾಡಿಕೊಂಡಿದ್ದಾರೆ. ಅರಿಶಿಣ ಬೆಳೆಗಾರರ ಶ್ರೇಯಸ್ಸಿಗಾಗಿ ಸಂಘ ಕಾರ್ಯ ನಿರ್ವಹಿಸುತ್ತಿದೆ. ಸಂಘದಲ್ಲಿ ಒಟ್ಟು 16 ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ಅರಿಶಿಣ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಲು ಸದಸ್ಯರ ತಂಡ ಚಿಂತನೆ ನಡೆದಿದೆ.

ನನ್ನ ತೋಟದಲ್ಲಿ ಸಾವಯವ ವಿಧಾನದಲ್ಲಿ ಅರಿಶಿಣ, ಬಾಳೆ, ನಿಂಬೆ, ವೀಳ್ಯದೆಲೆ ಬೆಳೆಯಲಾಗಿದ್ದು, ಸಾವಯವ ವಿಧಾನದಲ್ಲಿ ಶ್ರಮ ಜಾಸ್ತಿ ಇದ್ದರೂ ಖರ್ಚು ಕಡಿಮೆ ಇರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಭೂಮಿ ಇಳಿಸಲು ಈ ವಿಧಾನ ಅನುಸರಿಸುವುದು ಅನಿವಾರ್ಯ. ಅಲ್ಲದೆ, ವಿಷಮುಕ್ತ, ಆರೋಗ್ಯವಂತ ಸಮಾಜ ನಿರ್ಮಾಣವೂ ಜನಸೇವೆಯೇ ಆಗಿದೆ. ಎನ್.ಮಂಜುನಾಥ್, ಪ್ರಗತಿಪರ ರೈತ ಮತ್ತು ಗ್ರಾಪಂ ಸದಸ್ಯ ಹರದನಹಳ್ಳಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net