

ಹುಬ್ಬಳ್ಳಿ: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಸಮುದಾಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂದು ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಹೇಳಿದರು.
ನಗರದ ಕೇಶ್ವಾಪುರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಲ್ಲಿ ಬುಧವಾರ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರಾಹ್ಮಣರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಮಂಡಳಿ ರೂಪಿಸಲಿದೆ, ಆರ್ಥಿಕವಾಗಿ ಹಿಂದುಳಿದವರ ಉನ್ನತಿಗೆ ಆದ್ಯತೆ ನೀಡಲಾಗುವದು ಎಂದರು.
ಕೇಶ್ವಾಪುರ ಸಂಘದ ಅಧ್ಯಕ್ಷ ಸುನೀಲ ಗುಮಾಸ್ತೆ, ಸಂಘದ ಚಟುವಟಿಕೆ ವಿವರಿಸಿ, ಕಟ್ಟಡದ ವಿಸ್ತರಣೆ ಕಾಮಗಾರಿಗಾಗಿ ಆರ್ಥಿಕ ನೆರವು ನೀಡಲು ಮನವಿ ಸಲ್ಲಿಸಿದರು. ಮಂಡಳಿ ಸದಸ್ಯರಾದ ಎಂಬಿ. ನಾತು, ಸುಬ್ರಾಯ ಹೆಗಡೆ ಇದ್ದರು.
ಸಂಘದ ಪದಾಧಿಕಾರಿಗಳಾದ ವಿಲಾಸ ಕೊಣ್ಣೂರ, ಅರುಣ ಭಂಡಿವಾಡ, ಮನೋಹರ ಪರ್ವತಿ, ಬಿ.ಜೆ. ಕುಲಕರ್ಣಿ, ಧೀರೇಂದ್ರ ಬಾಗಲಕೋಟೆ, ಮನೋಜ ಪರ್ವತೀಕರ ಹಾಗೂ ಚಿದಂಬರ ಸೌಹಾರ್ದ ಪತ್ತಿನ ಉಪಾಧ್ಯಕ್ಷ ಅರವಿಂದ ಪೂಜಾರ, ಡಾ. ಆಚಾರ್ಯ, ಎ.ಸಿ. ಗೋಪಾಲ, ಮುಂತಾದವರು ಭಾಗವಹಿಸಿದ್ದರು.
ಪ್ರಲ್ಹಾದ ಪರ್ವತಿ ಸ್ವಾಗತಿಸಿದರು. ವೆಂಕಟೇಶ ದಿವಾಣಜಿ ವಂದಿಸಿದರು.
ಉಪಜಾತಿ ಬಿಡಿ: ದಾಖಲೆಗಳಲ್ಲಿ ಉಪಜಾತಿ ನಮೂದಿಸುತ್ತಿರುವುದು ಬ್ರಾಹ್ಮಣ ಸಮಾಜದ ಏಳಿಗೆಗೆ ಪೂರಕವಾಗಿಲ್ಲ. ಆದ್ದರಿಂದ ಉಪಜಾತಿ ಬಿಟ್ಟು ಬ್ರಾಹ್ಮಣತ್ವ ಬೆಳೆಸಬೇಕು. ಮಕ್ಕಳ ಮದುವೆಯಂಥ ವಿಷಯದಲ್ಲಿ ಉಪಜಾತಿ ನೋಡಬಹುದು. ರಾಜ್ಯದಲ್ಲಿ ಬ್ರಾಹ್ಮಣತ್ವ ಉಳಿಯಬೇಕಾದರೆ ಎಲ್ಲರೂ ಒಂದಾಗಬೇಕು ಎಂದು ಮಂಗಳವಾರ ಸಂಜೆ ದೇಶಪಾಂಡೆ ನಗರದ ಶ್ರೀಕೃಷ್ಣ ಮಠದಲ್ಲಿ ಏರ್ಪಾಟಾಗಿದ್ದ ಸಮಾಲೋಚನಾ ಸಭೆಯಲ್ಲಿ ಸಚ್ಚಿದಾನಂದಮೂರ್ತಿ ಹೇಳಿದರು.
ಪುರೋಹಿತರನ್ನು ಮದುವೆಯಾಗುವ ಸಮಾಜದ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಧನ ಸೇರಿ ವಿವಿಧ ಯೋಜನೆಗಳನ್ನು ಮಂಡಳಿಯಿಂದ ಜಾರಿ ಮಾಡಲಾಗುತ್ತಿದೆ ಎಂದರು.
ಮಂಡಳಿ ನಿರ್ದೇಶಕ ಎಂ.ಬಿ. ನಾತು ಮಾತನಾಡಿ, ಸೌಲಭ್ಯಗಳ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಬಾರದು ಎಂದು ಮನವಿ ಮಾಡಿದರು. ಪ್ರಮುಖರಾದ ಗುರುರಾಜ ಕಟ್ಟಿ, ಶ್ರೀಕಾಂತ ಕೆಮ್ತೂರ, ಅನಂತರಾಜ ಭಟ್ಟ, ಗೋವಿಂದ ಜೋಶಿ ಇತರರು ಇದ್ದರು.