ಸಮುದಾಯದ ಪ್ರಗತಿ ಶಿಕ್ಷಣದ ಮೇಲೆ ಅವಲಂಬಿತ

03raju1
Published on

ಚಾಮರಾಜನಗರ: ಇಡೀ ಜಗತ್ತು ವಿಜ್ಞಾನ ಮತ್ತು ಕಲೆಯ ಮೇಲೆ ನಿಂತಿದೆ. ಈ ನಿಯಮದ ತಳಹದಿಯಲ್ಲಿ ವಿದ್ಯಾರ್ಥಿಗಳು ಸಾಗಬೇಕು ಎಂದು ಮೈಸೂರು ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ವಿ.ಷಣ್ಮುಗಂ ಹೇಳಿದರು.


ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷರ ಪದವಿ ವಿದ್ಯಾರ್ಥಿನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ವಿದ್ಯಾರ್ಥಿನಿಲಯದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.


ದೇಶದಲ್ಲಿರುವ ಎಲ್ಲ ಸಮುದಾಯಗಳಿಗೂ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಆಶಯಗಳನ್ನು ಮನವರಿಕೆ ಮಾಡಿಕೊಡಬೇಕಿದೆ. ಅಂಬೇಡ್ಕರ್ ನಮ್ಮೆಲ್ಲರ ಉದ್ಧಾರಕ್ಕಾಗಿ ಶ್ರಮವಹಿಸಿರುವುದರಿಂದ ಅವರ ತತ್ವ, ಆದರ್ಶಗಳನ್ನು ಅನುಸರಿಸಿ ಮುನ್ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.


ಸಮುದಾಯದ ಪ್ರಗತಿ ಶಿಕ್ಷಣದ ಆಧಾರದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಬಾಬಾ ಸಾಹೇಬರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಬುದ್ಧ, ಸಂತ ಕಬೀರ ಹಾಗೂ ಜ್ಯೋತಿಬಾ ಫುಲೆ ಅವರನ್ನು ಅಂಬೇಡ್ಕರ್ ನನ್ನ ಗುರುಗಳು ಎಂದು ಒಪ್ಪಿಕೊಂಡಿದ್ದಾರೆ. ಅಂತಹ ಮಹಾಪುರುಷರ ಹಾದಿಯಲ್ಲಿ ಸಾಗಬೇಕು ಎಂದರು.
ಡಾ.ಪಿ.ದೇವರಾಜು ಮಾತನಾಡಿ, ಈ ನೆಲದ ಪ್ರತಿಯೊಬ್ಬ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆಯನ್ನು ಸ್ಮರಿಸಬೇಕು. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ್, ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಸ್.ಚಂದ್ರಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net