ಸಮುದಾಯಕ್ಕೆ ಹರಡುವ ಹಂತದಲ್ಲಿ ಕರೊನಾ

b y raghavendra 1
Published on

ತೀರ್ಥಹಳ್ಳಿ: ಕರೊನಾ ವೈರಸ್ ಸೋಂಕು ಸಮುದಾಯ ಮಟ್ಟದಲ್ಲಿ ವ್ಯಾಪಿಸುವ ಹಂತಕ್ಕೆ ತಲುಪಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಜಾಗ್ತೆ ವಹಿಸುವ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲೂಕಿನ ಕರೊನಾ ಸೇನಾನಿಗಳ ಗೌರವಾರ್ಥ ಆಯೋಜಿಸಿದ್ದ ಸಮಾರಂಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ಮತ್ತು ಥರ್ವ ಪ್ಲಾಸ್ಕ್ ವಿತರಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಈ ಸೋಂಕು ಅತ್ಯಂತ ಅಪಾಯದ ಹಂತ ತಲುಪುವ ಸೂಚನೆಗಳು ಗೋಚರವಾಗುತ್ತಿದೆ. ಜನರು ವೈಯಕ್ತಿಕವಾಗಿ ಈ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಕರೊನಾ ವಿಪತ್ತನ್ನು ನಿಯಂತ್ರಿಸುವಲ್ಲಿ ಈ ಕಾರ್ಯಕರ್ತೆಯರು ಮಾಡುತ್ತಿರುವ ಬದ್ಧತೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಇದಕ್ಕೆ ಮುನ್ನ ತಾಲೂಕಿನ ಅಂಬುತೀರ್ಥದಲ್ಲಿರುವ ಶರಾವತಿ ನದಿ ಮೂಲಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಿ.ವೈ.ರಾಘವೇಂದ್ರ, ಈ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು.

ನಾಡಿಗೆ ಬೆಳಕನ್ನು ನೀಡುವ ನದಿಯ ಮೂಲ ಸ್ಥಾನವಾದ ಮತ್ತು ಪುರಾಣ ಪ್ರಸಿದ್ಧವಾದ ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುವಲ್ಲಿ ಪ್ರವಾಸೋದ್ಯಮ, ನೀರಾವರಿ ಮುಂತಾದ ಇಲಾಖೆಗಳ ಆರ್ಥಿಕ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂತರ ಪಟ್ಟಣದ ಸಮೀಪದ ತುಡ್ಕಿ ಬಡಾವಣೆಯಲ್ಲಿ ನಿರ್ವಣಗೊಳ್ಳುತ್ತಿರುವ 13 ಕೋಟಿ ವೆಚ್ಚದ ಒಕ್ಕಲಿಗರ ಸಮುದಾಯ ಭವನದ ಕಾಮಗಾರಿಯನ್ನು ವೀಕ್ಷಿಸಿದರು. ಜತೆಗೆ ಕುರುವಳ್ಳಿಯಲ್ಲಿ ಬಿಲ್ಲವ ಸಮಾಜದ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಶಾಸಕ ಆರಗ ಜ್ಞಾನೇಂದ್ರ, ನೀರಾವರಿ ಇಲಾಖೆಯ ಅಧಿಕಾರಿ ರಮೇಶ್, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಪುರಾತತ್ವ ಇಲಾಖೆಯ ಶೇಜೇಶ್ವರ್, ಲಕ್ಷ್ಮೀನಾರಾಯಣ ಕಾಶಿ, ಜಿಪಂ ಸದಸ್ಯೆ ಅಪೂರ್ವಾ ಶರಧಿ, ತಹಸೀಲ್ದಾರ್ ಡಾ. ಶ್ರೀಪಾದ್, ಎಸ್. ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net