ನಾಗಮಂಗಲ: ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿಶ್ವಕರ್ಮ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ರಾಜ್ಯ ಕಾರ್ಯದರ್ಶಿ ಎಂ.ಈರಾಚಾರಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಚುನಾವಣಾ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸೇರಿರುವ ರಘು ಆಚಾರ್ ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷ ವಿಶ್ವಕರ್ಮ ಜನಾಂಗಕ್ಕೆ 60 ವರ್ಷಗಳಿಂದಲೂ ಸಹ ಬೆನ್ನೆಲುಬಾಗಿ ಕೆಲಸ ಮಾಡಿಕೊಂಡು ಬಂದಿದೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಏಳಿಗೆಗಾಗಿ 25 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಶ್ವಕರ್ಮ ಜಯಂತಿಯನ್ನೂ ಸಹ ಆಚರಣೆಗೆ ತಂದರು. ಅಮರಶಿಲ್ಪಿ ಜಕಣಾಚಾರಿ ಅವರ ಪ್ರತಿಮೆ ಅನಾವರಣ ಮಾಡುವ ಜತೆಗೆ ಸರ್ಕಾರವೇ ಸಂರಕ್ಷಣಾ ದಿನವನ್ನು ಆಚರಣೆ ಮಾಡುವಂತೆ ಒತ್ತಾಯವಾಗಿತ್ತು. ನಮ್ಮ ವಿಶ್ವಕರ್ಮ ಸಮಾಜಕ್ಕೆ ಇಷ್ಟೆಲ್ಲ ಕೊಡುಗೆ ನೀಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ನೈತಿಕತೆ ರಘು ಆಚಾರ್‌ಗೆ ಇಲ್ಲ ಎಂದರು.
ಎರಡು ಬಾರಿ ಕಾಂಗ್ರೆಸ್ ಎಂಎಲ್‌ಸಿ ಆಗಿದ್ದರೂ ರಾಜಕೀಯವಾಗಿ ಎತ್ತರಕ್ಕೆ ಬೆಳೆದಿರುವ ರಘು ಆಚಾರ್ ಟಿಕೆಟ್ ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ಪಕ್ಷವನ್ನು ತೊರೆದು ಟೀಕಿಸುತ್ತಿರುವುದು ನಿಮ್ಮ ಸ್ವಾರ್ಥ ಭಾವನೆಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.
ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಅವರು ವಿಶ್ವಕರ್ಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜನಾಂಗದ ಅಭಿವೃದ್ಧಿಗೆ ಚಲುವರಾಯಸ್ವಾಮಿ ಕಳಕಳಿ ಹೊಂದಿದ್ದಾರೆ. ಸಮುದಾಯದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಜನಾಂಗದೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಕ್ಷೇತ್ರದ ಸಮುದಾಯದ ಮತದಾರರು ರಘು ಆಚಾರ್ ಮಾತಿಗೂ ಕಿವಿಕೊಡದೆ ಚಲುವರಾಯಸ್ವಾಮಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ತಾ.ಪಂ. ಮಾಜಿ ಅಧ್ಯಕ್ಷ ಅಣ್ಣಯ್ಯಚಾರಿ, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಎ.ಸಿ.ಬಾಲಕೃಷ್ಣ, ಮಣ್ಣಹಳ್ಳಿ ಗ್ರಾ.ಪಂ.ಸದಸ್ಯ ಸುನಿತಾರುದ್ರಾಚಾರ್, ಬೆಳ್ಳೂರಿನ ಮೋಹನ್, ರುದ್ರೇಶಚಾರ್, ಕಿರಣ್ ಸೇರಿದಂತೆ ಹಲವರು ಇದ್ದರು.