

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ, ಸರ್ಕಾರಿ ನೌಕರರ ಸಮುದಾಯ ಭವನಕ್ಕೆ ಕನಿಷ್ಠ 2 ಎಕರೆ ಭೂಮಿ ಒದಗಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಜಿಲ್ಲಾಧ್ಯಕ್ಷ ಮಾಲತೇಶ ಮುದಜ್ಜಿ ನೇತೃತ್ವದ ನಿಯೋಗ ಬುಧವಾರ ಮನವಿ ಸಲ್ಲಿಸಿತು. ಇದಕ್ಕೆ ಸ್ಪಂದಿಸಿದ ಡಿಸಿ, ಪರಿಶೀಲನೆ ನಡೆಸಿ ಭೂಮಿ ಒದಗಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಮುದಜ್ಜಿ, ಸರ್ಕಾರಿ ನೌಕರರ ವಿವಿಧ ಸಮುದಾಯ ಆಧಾರಿತ ಚಟುವಟಿಕೆಗಳಿಗಾಗಿ ನಗರದಲ್ಲಿ ಸಮುದಾಯ ಭವನದ ಅಗತ್ಯವಿದೆ. ಏ.16, 17 ರಂದು 2 ದಿನಗಳ ಕಾಲ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿಕೊಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಏ.16ರಂದು ಇತರ ಸ್ಪರ್ಧಾತ್ಮಕ ಪರೀಕ್ಷೆ ಇದೆ. ಕ್ರೀಡಾಕೂಟದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸೋಣ, ಅದಕ್ಕಾಗಿ ದಿನಾಂಕ ಬದಲಾವಣೆಯ ಅಗತ್ಯವಿದೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ, ಏ.16 ರ ಬದಲು 15 ರಂದೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ರೀಡಾಕೂಟ ಉದ್ಘಾಟನೆಗೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲೂ ತೀವ್ರ ಉಷ್ಣಗಾಳಿ ಬೀಸುವ ಸಂಭವವಿದ್ದು, ಕಚೇರಿಗೆ ಆಗಮಿಸುವ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರಿಗೂ ತೊಂದರೆಯಾಗದಂತೆ ಕಚೇರಿ ಸಮಯವನ್ನು ಉತ್ತರ ಕರ್ನಾಟಕದ ಮಾದರಿ ಬೆಳಗ್ಗೆ 8ರಿಂದ ಮಧ್ಯಾಹ್ನ 1.30 ರವರೆಗೆ ನಿಗದಿಪಡಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದರು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಕಾರ್ಯಾಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಎಚ್.ಪೂಜಾರ್, ಖಜಾಂಚಿ ಮಲ್ಲಿಕಾರ್ಜುನ್, ಕಾರ‌್ಯದರ್ಶಿ ಶ್ರೀನಿವಾಸ್, ಬಿ.ರುದ್ರಮುನಿ, ವಿಮಲಾಕ್ಷಿ ಇತರರಿದ್ದರು.