ಸಮುದಾಯ ಭವನಕ್ಕೆ ನಿವೇಶನ ನೀಡಲು ಆಗ್ರಹ

22 SARAG 02
Published on

ಸರಗೂರು: ಪಟ್ಟಣದ 11ನೇ ವಾರ್ಡ್‌ನಲ್ಲಿ ಖಾಲಿ ಇರುವ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಡಗಲು ಗ್ರಾಮಸ್ಥರು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ ಮಾಡಿದರು.

ವಾರ್ಡ್‌ನ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿಯ ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲು ಆಗಮಿಸಿದ್ದ ಶಾಸಕರಿಗೆ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.

ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ರುದ್ರಭೂಮಿ ಸುತ್ತ ತಂತಿಬೇಲಿ ನಿರ್ಮಾಣ ಮಾಡಿ ಕೊಳವೆ ಬಾವಿ ಹಾಕಿಸುವುದು, ದಲಿತರ ಬೀದಿಯಲ್ಲಿ ಒಂದೇ ಮನೆಯಲ್ಲಿ 4ರಿಂದ 5 ಕುಟುಂಬದ ಸದಸ್ಯರು ವಾಸ ಮಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ನಿವೇಶನ ನೀಡಬೇಕು. ಚರಂಡಿ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮನವಿ ಆಲಿಸಿದ ಶಾಸಕರು, ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಕೊಡುವುದಾಗಿ ಭರವಸೆ ನೀಡಿದರು. ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗದ ದಾಖಲೆ ಪರಿಶೀಲನೆ ನಡೆಸಿ ಮಂಜೂರು ಮಾಡಲು ಕ್ರಮ ವಹಿಸುವುದಾಗಿ ಆಶ್ವಾಸನೆ ನೀಡಿದರು.

ದಸಂಸ ಮುಖಂಡ ಬಿಡಗಲು ಶಿವಣ್ಣ, ಹಿರಿಯರಾದ ಬಿ.ಎಸ್.ದೊಡ್ಡಯ್ಯ, ಮಹದೇವಪ್ಪ, ಬಿ.ಸಿ.ಶಿವಣ್ಣ, ಪ್ರಕಾಶ, ಲಿಂಗರಾಜು, ಚನ್ನಯ್ಯ, ಗೋಪಾಲಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರವಿ, ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಮುಖ್ಯಾಧಿಕಾರಿ ವಸಂತ ಕುಮಾರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net