ಸಮುದಾಯ ಒಡೆಯುವ ಕೆಲಸ ಬಿಡಬೇಕು

Published on

ಎಚ್.ಡಿ.ಕೋಟೆ: ಸಮುದಾಯ ಒಡೆಯುವ ಕೆಲಸವನ್ನು ತಾಲೂಕು ನಾಯಕ ಸಮಾಜದ ಎಂ.ಸಿ ದೊಡ್ಡನಾಯಕ ಕೈಬೇಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾಯಕ ಸಮಾಜ ಸರಿಯಾದ ಪಾಠ ಕಲಿಸಲಿದೆ ಎಂದು ಚಿಕ್ಕಮಾದು ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ಎಚ್ಚರಿಕೆ ನೀಡಿದರು. ಎಂ.ಸಿ ದೊಡ್ಡನಾಯಕ ಅವರು ತಾಲೂಕು ನಾಯಕ ಸಮಾಜದ ಮಾಜಿ ಗೌರವಾಧ್ಯಕ್ಷರೇ ಹೊರತು, ತಾಲೂಕು ಅಧ್ಯಕ್ಷರಲ್ಲ. ಫೆ.19 ರಂದು ಪದವೀಧರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ನಾನೇ ಎಂದು ಹೇಳಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊರಗಿನಿಂದ ಬಂದು ಚುನಾವಣೆಗೆ ಸ್ಪರ್ಧೆ ಮಾಡುವವರನ್ನು ತಾಲೂಕು ನಾಯಕ ಸಮಾಜ ಬೆಂಬಲಿಸಬಾರದು ಎಂದು ಸಭೆಯಲ್ಲಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂದು ಹೇಳಿಕೊಂಡು ಮಾಡಬಾರದ ಕೆಲಸ ಮಾಡಿ ಸಮಾಜಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಎಂ.ಸಿ ದೊಡ್ಡನಾಯಕ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಸಮಾಜದ ಅಧ್ಯಕ್ಷ ಎಂದು ಸುಳ್ಳು ಹೇಳಿಕೊಳ್ಳುವ ವ್ಯಕ್ತಿಗೆ ಜನಾಂಗದ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿ ಚಿಂತನೆಗಳ ಬಗ್ಗೆ, ಜನಾಂಗದ ಕಳಕಳಿಯ ಬಗ್ಗೆ ಕಾಳಜಿ ಇಲ್ಲ. ಸಮಾಜದಲ್ಲಿ ದ್ವೇಷ ಭಾವನೆ ಉಂಟು ಮಾಡಿ ಸಮಾಜದ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ನಾಯಕ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕ್ಯಾತನಹಳ್ಳಿ ನಾಗರಾಜು ಮಾತನಾಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಜನರ ಹಕ್ಕುಗಳ ಬಗ್ಗೆ ಎಂ.ಸಿ ದೊಡ್ಡನಾಯಕ ತಿಳಿದುಕೊಳ್ಳುವುದು ಸೂಕ್ತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಹತೆ ಇರುವ ವ್ಯಕ್ತಿ ದೇಶದ ಎಲ್ಲಿ ಬೇಕಾದರೂ ಸ್ಪರ್ಧಿಸಲು ಅವಕಾಶವಿರುತ್ತದೆ. ಜನಾಭಿಪ್ರಾಯವಿರುವ ವ್ಯಕ್ತಿ ಜಯ ಗಳಿಸುತ್ತಾನೆ. ಶಾಸಕನಾಗಬೇಕಾದರೆ ಎಲ್ಲ ಸಮುದಾಯದ ಜನರ ಬೆಂಬಲ ಬೇಕು ಎಂದು ತಿಳಿದುಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ನಾಯಕ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗನಾಯಕ, ಸವ್ವೆ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜೇಂದ್ರ, ನಾಯಕ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚಲುವಕೃಷ್ಣ ನಾಯಕ, ದಾಸನಾಯಕ, ರಘು, ಬಸವರಾಜು, ರವಿ, ಗೋಕುಲ್, ಬೆಟ್ಟನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net