ಸಮುದಾಯ ಆರೋಗ್ಯ ತಪಾಸಣೆ 15ರಿಂದ

12-RNR-06
Published on

ಹಾವೇರಿ: ಸಮುದಾಯ ಜನರ ಆರೋಗ್ಯದ ಸ್ಥಿತಿಗತಿಯನ್ನು ವೈಜ್ಞಾನಿಕ ತಪಾಸಣೆಯ ಮೂಲಕ ಮಾಹಿತಿ ಸಂಗ್ರಹಿಸಲು ಏ. 15ರಿಂದ ಜಿಲ್ಲೆಯ ಪ್ರತಿ ಮನೆ ಮನೆಗೆ ತೆರಳಿ ವ್ಯಕ್ತಿಗಳ ಆರೋಗ್ಯ ತಪಾಸಣೆ ಆರಂಭಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಹೇಳಿದರು.

ಇಲ್ಲಿಯ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ತಹಸೀಲ್ದಾರ್, ತಾಲೂಕು ಪಂಚಾಯಿತಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗಾಗಿ ಭಾನುವಾರ ಏರ್ಪಡಿಸಿದ್ದ ಕಮ್ಯೂನಿಟಿ ಹೆಲ್ತ್ ಚೆಕ್​ಅಪ್ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಆದಾಗ್ಯೂ ತಳಮಟ್ಟದಲ್ಲಿ ಆರೋಗ್ಯದ ಸ್ಥಿತಿಗತಿಗಳ ಮಾಹಿತಿಗಾಗಿ ಸಮುದಾಯದ ಜನರ ಆರೋಗ್ಯ ತಪಾಸಣೆಗೊಳಪಡಿಸಿ ಹೆಲ್ತ್ ರಿಪೋಟ್ ಪಡೆಯಲು ಉದ್ದೇಶಿಸಲಾಗಿದೆ. ಸಾಮಾನ್ಯ ಅನಾರೋಗ್ಯ ವ್ಯಕ್ತಿಗಳಿಗೆ ಆಯಾ ಗ್ರಾಮದಲ್ಲೇ ಚಿಕಿತ್ಸೆ ನೀಡಲು ಶಿಬಿರ ಆಯೋಜಿಸಲಾಗುವುದು. ತಪಾಸಣೆ ವೇಳೆ ಕರೊನಾ ಲಕ್ಷಣಗಳು ಯಾವುದಾದರೂ ವ್ಯಕ್ತಿಗಳಲ್ಲಿ ಪತ್ತೆಯಾದರೆ, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ಮುಂಜಾಗ್ರತೆ ಕ್ರಮವಾಗಿ ಕಮ್ಯೂನಿಟಿ ಹೆಲ್ತ್ ಚೆಕ್​ಅಪ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಾಮಾನ್ಯ ಆರೋಗ್ಯ ತಪಾಸಣೆ ವೇಳೆಯಲ್ಲಿ ಜನರಿಗೆ ಇತರ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಆಯಾ ಗ್ರಾಮದಲ್ಲೇ ಹೆಲ್ತ್​ಕ್ಯಾಂಪ್ ನಡೆಸಿ ಚಿಕಿತ್ಸೆ ನೀಡಬೇಕು. ಸರ್ಕಾರಿ ವೈದ್ಯರ ಜತೆಗೆ ಭಾರತೀಯ ವೈದ್ಯಕೀಯ ಸಂಘ ಹಾಗೂ ಖಾಸಗಿ ವೈದ್ಯರ ನೆರವು ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆ ಇದೆ. 708 ಗ್ರಾಮಗಳಿವೆ, 67 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಆರೋಗ್ಯ ಕೇಂದ್ರಗಳ ಪೈಕಿ 47 ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು, 20 ಕೇಂದ್ರದಲ್ಲಿ ಆಯುಷ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ 10 ರಿಂದ 15 ಹಳ್ಳಿಗಳು ಬರುತ್ತವೆ. ಈ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಒಂದೊಂದು ಗ್ರಾಮ ಆಯ್ಕೆ ಮಾಡಿ ತಪಾಸಣೆ ಆರಂಭಿಸಬೇಕು. ಇದರಿಂದ ಪ್ರತಿ ದಿನ ಜಿಲ್ಲೆಯ 67 ಹಳ್ಳಿಗಳ ಸರ್ವೆ ಕಾರ್ಯ ಪೂರ್ಣಗೊಳ್ಳುತ್ತದೆ. 15 ದಿನದೊಳಗಾಗಿ ಎಲ್ಲ ಗ್ರಾಮಗಳ ಸರ್ವೆ ಪೂರ್ಣಗೊಳಿಸಬಹುದು ಎಂದು ಸಲಹೆ ನೀಡಿದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರು ಒಳಗೊಂಡ ಮೂರು ಜನರ ತಂಡ ರಚಿಸಿ ಪ್ರತಿ ತಂಡಕ್ಕೆ 50 ಮನೆಗಳಂತೆ ಹಂಚಿಕೆ ಮಾಡಿ ತಪಾಸಣೆ ಆರಂಭಿಸಬೇಕು. ಅಕ್ಕಪಕ್ಕ ಗ್ರಾಮದ ಆಶಾ, ಅಂಗನವಾಡಿ ಕಾರ್ಯಕರ್ತೆಯರು,ಹಾಗೂ ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಿ ಗ್ರಾಮದ ಮನೆಗಳ ಸಂಖ್ಯೆಗನುಸಾರ ಹೆಚ್ಚುವರಿ ತಂಡ ರಚಿಸಿ ಪ್ರತಿ ಮನೆಯ ಪ್ರತಿ ವ್ಯಕ್ತಿಯ ಮಾಹಿತಿ ಪಡೆಯಬೇಕು. ದೊಡ್ಡ ಗ್ರಾಮಗಳಿದ್ದಲ್ಲಿ ಎರಡು ದಿನ ತಪಾಸಣೆ ನಡೆಸಿ. ಈ ತಂಡಗಳು ಬೆಳಗ್ಗೆ ಸಂಗ್ರಹಿಸಿದ ಮಾಹಿತಿ ಅನುಸಾರ ಮಧ್ಯಾಹ್ನ ಆಯಾ ಗ್ರಾಮದಲ್ಲೇ ಸರ್ಕಾರಿ ಶಾಲೆ ಅಥವಾ ಕಟ್ಟಡಗಳಲ್ಲಿ ಹೆಲ್ತ್​ಕ್ಯಾಂಪ್ ನಡೆಸಿ ಅಗತ್ಯವಿರುವ ಜನರಿಗೆ ಚಿಕಿತ್ಸೆ ನೀಡಿ. ಕೋವಿಡ್ ಲಕ್ಷಣಗಳು ಕಂಡುಬಂದರೆ ಮಾದರಿ ಸಂಗ್ರಹಕ್ಕೆ ತಾಲೂಕು ಆರೋಗ್ಯ ಕೇಂದ್ರಗಳಿಗೆ ವಾಹನಗಳ ಮೂಲಕ ಕಳುಹಿಸಿಕೊಡಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಕೇಂದ್ರ ವ್ಯಾಪ್ತಿಯ ಸಮೀಕ್ಷೆಯ ಮುಖ್ಯಸ್ಥರಾಗಿರುತ್ತಾರೆ. ಪೋಲಿಯೋ ಲಸಿಕೆ ಮಾದರಿಯಲ್ಲಿ ಮನೆ ಮನೆಯ ಗುರುತು ಸಮೀಕ್ಷೆ ಕೈಗೊಳ್ಳಬೇಕು. ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿ ಮಧ್ಯಾಹ್ನದ ನಂತರ ಎಲ್ಲ ಆರೋಗ್ಯ ಸಿಬ್ಬಂದಿಯೊಂದಿಗೆ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡ ಗ್ರಾಮಕ್ಕೆ ತೆರಳಬೇಕು. ಆಯಾ ಗ್ರಾಮದ ಸರ್ಕಾರಿ ಕಟ್ಟಡ ಅಥವಾ ಸರ್ಕಾರಿ ಶಾಲಾ ಕಟ್ಟಡಗಳಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಮನೆ ಮನೆ ಸಮೀಕ್ಷೆ ನಡೆಸುವ ಕಾರ್ಯಕರ್ತೆಯರಿಗೆ ವಾಹನ ಸೌಕರ್ಯ, ಅಕ್ಷರ ದಾಸೋಹದಡಿ ಊಟದ ವ್ಯವಸ್ಥೆ, ಆಯಾ ಗ್ರಾಮಗಳಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ನಡೆಸಿ ತಪಾಸಣೆ ನಡೆಸಲು ಅಗತ್ಯವಾದ ಸರ್ಕಾರಿ ಕಟ್ಟಡ ಅಥವಾ ಶಾಲೆಗಳನ್ನು ಗುರುತಿಸಿ ಕುಡಿಯುವ ನೀರು ಸೇರಿ ಮೂಲಸೌಕರ್ಯ ಕಲ್ಪಿಸಲು ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಉಸ್ತುವಾರಿ ವಹಿಸಲು ಸೂಚಿಸಿದರು.

ಸಮೀಕ್ಷೆ ಕಾರ್ಯಕರ್ತರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳು, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ಗೂಗಲ್ ಆಧಾರಿತ ಸಮೀಕ್ಷಾ ಮಾಹಿತಿಯ ವರದಿ ಕಳುಹಿಸುವ ಕೊಡುವ ವ್ಯವಸ್ಥೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಗಳಲ್ಲಿ ನಡೆಯುವ ಹೆಲ್ತ್ ಕ್ಯಾಂಪ್​ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮೀಕ್ಷಾ ತಂಡಕ್ಕೆ ಅಗತ್ಯವಾದ ತರಬೇತಿ ನೀಡಬೇಕು. ಸೋಮವಾರ ಹಾಗೂ ಮಂಗಳವಾರದೊಳಗೆ ತಾಲೂಕಾವಾರು ಸಭೆ ನಡೆಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವಾರು ತಪಾಸಣೆಯ ಯೋಜನೆ ಸಿದ್ಧಪಡಿಸಿ ಏ. 15ರಿಂದ ಅಧಿಕೃತವಾಗಿ ಸಮೀಕ್ಷೆ ಕಾರ್ಯವನ್ನು ಕಡ್ಡಾಯವಾಗಿ ಆರಂಭಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಆರ್​ಸಿಎಚ್ ಅಧಿಕಾರಿ ಡಾ. ಜಯಾನಂದ, ಹಾವೇರಿ ಉಪವಿಭಾಗಾಧಿಕಾರಿ ಡಾ. ದಿಲೀಪ ಶಶಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಎಲ್ಲ ತಾಲೂಕಿನ ತಹಸೀಲ್ದಾರರು, ತಾಪಂ ಇಒ, ತಾಲೂಕು ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net