ಸಮೀಕ್ಷೆಯಲ್ಲಿ ಮಾಹಿತಿ ಬಿಟ್ಟು ಹೋಗದಂತೆ ಎಚ್ಚರ ವಹಿಸಿ

Published on

ಹನೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಆದಿವಾಸಿ ಸಮುದಾಯಗಳ ಮಾಹಿತಿ ಕೈ ಬಿಟ್ಟು ಹೋಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಕರ್ನಾಟಕ ಅರಣ್ಯ ಮೂಲ ಆದಿವಾಸಿ ಬುಡಕಟ್ಟು ಸಂಘಟನೆಗಳ ಒಕ್ಕೂಟದ ಸಂಯೋಜಕ ವಿ.ಮುತ್ತಯ್ಯ ತಿಳಿಸಿದ್ದಾರೆ.

ರಾಜ್ಯದ ಚಾಮರಾಜನಗರ, ಮೈಸೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಸೇರಿದಂತೆ 13 ಜಿಲ್ಲೆಗಳಲ್ಲಿ 1500 ಹಾಡಿ, ಪೋಡು, ದೊಡ್ಡಿ ಹಾಗೂ ಕಾಲನಿಗಳಲ್ಲಿನ 1 ಲಕ್ಷ ಕುಟುಂಬಗಳ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸುತ್ತಿದೆ. ಆದರೆ ನೆಟ್‌ವರ್ಕ್ ಸಮಸ್ಯೆ, ಅಗತ್ಯ ದಾಖಲಾತಿಗಳ ಕೊರತೆ ಹಾಗೂ ಇನ್ನಿತರ ಕಾರಣಗಳು ಸಮೀಕ್ಷೆಗೆ ಅಡ್ಡಿಯಾಗಲಿದೆ. ಇದರಿಂದ ರಾಜ್ಯದ ಯೋಜನಾ ಪ್ರದೇಶಗಳು ಸೇರಿದಂತೆ ವಿವಿಧ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯ ಅರಣ್ಯ ಹಾಗೂ ಕಾಡಂಚಿನಲ್ಲಿ ನೆಲೆಸಿರುವ ನೈಜ ದುರ್ಬಲ ಬುಡಕಟ್ಟುಗಳಾದ ಕೊರಗ, ಜೇನು ಕುರುಬ ಹಾಗೂ ಅರಣ್ಯ ಮೂಲ ಆದಿವಾಸಿ ಸಮುದಾಯಗಳಾದ ಬೆಟ್ಟ ಕುರುಬ, ಯರವ, ಪಣಿಯನ್, ಕುಡಿಯ, ಮಲೆ ಕುಡಿಯ, ಹಸಲರು, ಇರುಳಿಗ ಹಾಗೂ ಸಿದ್ಧಿ ಸಮುದಾಯಗಳ ಬಹುಪಾಲು ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆಯಾ ಜಿಲ್ಲೆಗಳ ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಅಗತ್ಯ ಕ್ರಮವಹಿಸಿ ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಜತೆಗೆ ಆದಿವಾಸಿ ಪ್ರದೇಶಗಳಲ್ಲಿ ಪರ್ಯಾಯ ವಿಧಾನದ ಮೂಲಕ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಲು ಮುಂದಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net