ಸಮೀಕ್ಷೆಗೆ ಗೈರು ಹಾಜರಾದ 8 ಸಹ ಶಿಕ್ಷಕರ ಅಮಾನತು

suspended
Published on

ಮೈಸೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಗೈರಾದ 8 ಸಹ ಶಿಕ್ಷಕರು ಅಮಾನತು ಮಾಡಲಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಜಿಲ್ಲಾದ್ಯಂತ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷಾ ಗಣತಿ ಕಾರ್ಯಕ್ಕೆ ಹಾಜರಾಗದೆ ಅಧಿಕಾರಿಗಳ ದೂರವಾಣಿ ಕರೆಯನ್ನು ಸ್ವೀಕರಿಸದೆ ಬೇಜವಾಬ್ದಾರಿ ಹಾಗೂ ಅತೀವ ನಿರ್ಲಕ್ಷ್ಯ ತೋರಿದ್ದಾರೆ.

ಈ ಕಾರಣಕ್ಕೆ 8 ಸಹ ಶಿಕ್ಷಕರನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್‌ಕುಮಾರ್ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ.ಜವರೇಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಉತ್ತರ ವಲಯದ ಕೆಸರೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರಾಜೇಂದ್ರನಗರದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ, ದಕ್ಷಿಣ ವಲಯದ ಜಾಕಿ ಕ್ವಾರ್ಟರ್ಸ್ ಆದರ್ಶ ವಿದ್ಯಾಲಯ, ಬಿ.ಬಿ. ಗಾರ್ಡನ್‌ನ ಶ್ರೀಶಾರದಾ ಪ್ರೌಢಶಾಲೆ, ಹುಣಸೂರು ತಾಲೂಕಿನ ಕರಿಗೌಡರ ಬೀದಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಮರುಳಯ್ಯನಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಿಮುದ್ದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಆದರೆ, ಅಮಾನತುಗೊಂಡಿರುವ ಸಹ ಶಿಕ್ಷಕರ ಹೆಸರನ್ನು ಶಾಲಾ ಶಿಕ್ಷಣ ಇಲಾಖೆ ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net