ಸಮೀಕ್ಷೆ ವರದಿ ಬಳಿಕ ಸೆಕೆಂಡ್ ರಿಂಗ್‌ರೋಡ್ ಕೆಲಸ

3007 KLB 05
ಕಲಬುರಗಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಸಂಸದ ಡಾ.ಉಮೇಶ ಜಾಧವ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಇತರರಿದ್ದರು.
Published on

ಕಲಬುರಗಿ: ಜಿಲ್ಲೆ ಮತ್ತು ನಗರದ ಎಲ್ಲ ರಸ್ತೆಗಳ ಮಾದರಿ ಅಭಿವೃದ್ಧಿ ಹಾಗೂ ಎರಡನೇ ರಿಂಗ್ ರೋಡ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗಳು ಜಂಟಿ ಸರ್ವೇ ನಡೆಸಲು ಸೂಚಿಸಲಾಗಿದೆ. ವರದಿ ಬಂದ ನಂತರ ಹೊಸ ರಿಂಗ್‌ರೋಡ್ ಕೆಲಸ ಶುರುವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದರು.

ಜಿಲ್ಲೆಯ ಎಲ್ಲ ರಸ್ತೆಗಳ ಸರ್ವೇ ಮಾಡಲು ಆದೇಶಿಸಲಾಗಿದೆ. ಹಾಲಿ ರಿಂಗ್‌ರೋಡ್‌ನ ಸರ್ವೀಸ್ ರಸ್ತೆ ಸರಿಪಡಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗಿದ್ದು, ಶೀಘ್ರವೇ ಸರ್ವೇ ಆರಂಭಗೊಳ್ಳಲಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಲಬುರಗಿ ಎರಡನೇ ರಿಂಗ್‌ರೋಡ್ ಹಾಗೂ ಹೆದ್ದಾರಿಗಳಲ್ಲಿನ ಅಪಘಾತ ಸ್ಥಳಗಳನ್ನು ಪತ್ತೆ ಮಾಡಿ ಸರಿಪಡಿಸಲು ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಮೊನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಎರಡನೇ ರಿಂಗ್ ರೋಡ್ ಕಾಮಗಾರಿ ಸಮೀಕ್ಷೆ ವರದಿ ನಂತರ ಆರಂಭಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾಲ್ಕು ವರ್ಷದಿಂದ ನಿರಂತರ ಶ್ರಮಿಸುತ್ತಿರುವೆ. ಹಲವು ಯೋಜನೆಗಳ ಪ್ರಸ್ತಾವನೆಗಳನ್ನು ಸಲ್ಲಿಸಿರುವೆ. ಸಂಸತ್ತಿನಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ ಎಂದ ಅವರು, ಶನಿವಾರ ಕೆಕೆಸಿಸಿಐ ಸಭಾಂಗಣದಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿಲ್ಲ. ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಬದಲಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದರು. ಅವರಿಗೆ ಕೇಳುವ ಹಕ್ಕಿದೆ. ಸಮಜಾಯಿಷಿ ನೀಡಿದ್ದೇನೆ ಎಂದು ಹೇಳಿದರು.
ಮೆಗಾ ಜವಳಿ ಪಾರ್ಕ್, ಸೋಲಾರ್ ಪಾರ್ಕ್ ಸೇರಿ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಬೆಂಗಳೂರಿಗೆ ಹೊಸ ರೈಲು ಆರಂಭಿಸಿದ ಬಳಿಕ ರೈಲ್ವೆ ವಿಭಾಗ ಕೆಲಸ ಕೈಗೆತ್ತಿಕೊಳ್ಳುವೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್​ ನಮೋಶಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮುಖಂಡ ಹರ್ಷಾನಂದ್ ಗುತ್ತೇದಾರ್ ಇತರರಿದ್ದರು.

ಟಿಕೆಟ್‌ಗಿಂತಲೂ ನನಗೆ ಪಕ್ಷ ಮುಖ್ಯ
ನನಗೆ ಟಿಕೆಟ್‌ಗಿಂತ ಪಕ್ಷ ಮುಖ್ಯ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾಯಕರ ನಿರ್ದೇಶನದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವೆ ಎಂದು ಡಾ.ಉಮೇಶ ಜಾಧವ್ ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಟಿಕೆಟ್ ಯಾರಿಗೆ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ನಮಗೆ ಪಕ್ಷವೇ ಮುಖ್ಯ. ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನಾನು ಟಿಕೆಟ್​ ಬಗ್ಗೆ ಚಿಂತೆ ಮಾಡಲ್ಲ. ಈ ಸಲವೂ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಸೇರಿ ೨೦-೨೫ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಆಳಂದ ತಾಲೂಕಿನ ಹಳ್ಳಿಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆ ನಡೆಯಬಾರದು. ಕೂಡಲೇ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು. ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
| ಡಾ.ಉಮೇಶ ಜಾಧವ್
ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net