ಸಮೀಕ್ಷಾ ವರದಿಯನ್ನು ತ್ವರಿತವಾಗಿ ಸಲ್ಲಿಸಿ

Published on

ಚಾಮರಾಜನಗರ: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆಸುತ್ತಿರುವ ಸಮೀಕ್ಷಾ ವರದಿಯನ್ನು ಆಯೋಗವು ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ಡಾ.ಬಾಬು ಜಗಜೀವನ್ ರಾಮ್ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ ಒತ್ತಾಯಿಸಿದರು.

ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ನಡೆಸಿದ ಹೋರಾಟವನ್ನು ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯ 2024 ರ ಆ.1 ರಂದು ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ತೀರ್ಪು ನೀಡಿತ್ತು. ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಸರಿಯಾದ ವೈಜ್ಞಾನಿಕ ದತ್ತಾಂಶ ಇಲ್ಲದ ಕಾರಣ ಸರ್ಕಾರವು ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗವನ್ನು ರಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆದೇಶಿಸಿತ್ತು. ಅದರಂತೆ ನ.13 ರಂದು ಸರ್ಕಾರದ ಕ್ಯಾಬಿನೆಟ್ ಸಭೆಯು ನ್ಯಾ.ನಾಗಮೋಹನದಾಸ್ ಏಕ ಸದಸ್ಯ ಆಯೋಗವನ್ನು ನೇಮಿಸಿ 2 ತಿಂಗಳ ಕಾಲಾವಕಾಶ ನೀಡಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2011 ರ ಜನಗಣತಿಯ ಆಧಾರದಲ್ಲಿ ಆಯಾಯಾ ಜಿಲ್ಲೆಗಳಲ್ಲಿ ಜನಗಣತಿಯನ್ನು ನಡೆಸಿದೆ. ರಾಜ್ಯದಲ್ಲಿ ಶೇ.91-92 ರಷ್ಟು ಸಮೀಕ್ಷೆ ಮುಗಿದಿದೆ ಎಂದು ಹೇಳುತ್ತಿದೆ. ಇದುವರೆಗೆ 1,06,28,325 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಬೆಂಗಳೂರಿನ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಶೇ.50 ರಷ್ಟು ಜನರು ಮಾತ್ರ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಇನ್ನೂ ಉಳಿದದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಪದೇ ಪದೇ ಅವಧಿಯನ್ನು ವಿಸ್ತರಣೆ ಮಾಡದೆ ಆಯೋಗವು ವರದಿಯನ್ನು ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರವು ಕೂಡ ಆದಷ್ಟು ಬೇಗ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಸವನಪುರ ರಾಜಶೇಖರ್, ಬಾಲರಾಜ್, ಮಹದೇವು, ಮರಪ್ಪ, ಮಹದೇವು, ಗೋವಿಂದ, ಸಿದ್ದರಾಜು, ನರಸಿಂಹ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net