

ಹಾಸನ: ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಮೈಸೂರಿನಲ್ಲಿ ನಡೆಯುತ್ತಿರುವ ಬಿಜೆಪಿ - ಜೆಡಿಎಸ್ ಸಮಾವೇಶಕ್ಕೆ ನಗರದದಿಂದ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹೊರಟ ವಾಹನಗಳಿಗೆ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಚಾಲನೆ ನೀಡಿದರು.
ಕೆ.ಎಸ್ ಆರ್.ಟಿ.ಸಿ, ಖಾಸಗಿ ವಾಹನಗಳು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ವಾಹನಗಳಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ತೆರಳಿದರು.
ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಉದ್ದಕ್ಕೂ ಕೇವಲ ಬ್ರಷ್ಟಾಚಾರ ಮಾಡುವ ಮೂಲಕ ರಾಜ್ಯದ ಜನರಿಗೆ ವಂಚಿಸಿದೆ ಎಂದರು.
ಕೂಡಲೇ ಮುಖ್ಯಂತ್ರಿ ಸಿದ್ದರಾಮಯ್ಯ ಇದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ವಾಲ್ಮೀಕಿ ಹಗರಣ, ಮೂಡ ಹಗರಣ ಹೀಗೆ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಅರ್ಹತೆ ಇಲ್ಲ ಆದುದರಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಈ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ, ಜೆಡಿಎಸ್ ಕಳೆದ ಒಂದು ವಾರದಿಂದ ನಡೆದ ಪಾದಯಾತ್ರೆ ಶನಿವಾರ ಮೈಸೂರಿಗೆ ತಲುಪಲಿದ್ದು, ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಸುಮಾರು 7-8 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಅವರೆಲ್ಲರಿಗೂ ಈ ಮೂಲಕ ಸ್ವಾಗತ ಕೋರುವುದಾಗಿ ಹೇಳಿದರು
ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಹಳ್ಳಿ ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜೆಡಿಎಸ್ ವಕ್ತಾರ ರಘು ಹೊಂಗೆರೆ , ಜೆಡಿಎಸ್ ಮುಖಂಡರಾದ ವಾಸು, ಸೋಮು, ಇತರರು ಇದ್ದರು.