

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ಸೂರ್ಯ ಎಂದು ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಚಿತ್ರದುರ್ಗ ತಾಲೂಕು ಲಕ್ಷ್ಮೀಸಾಗರದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಸೋಮವಾರ ಸಂವಿಧಾನದ ಮೂಲ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಅಂಬೇಡ್ಕರ್ ಓದುವುದು, ಜ್ಞಾನರ್ಜನೆಯನ್ನು ತಪಸ್ಸು ಎಂದುಕೊಂಡಿದ್ದರು. ಶೋಷಣೆ ತಡೆಗೆ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅವರು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನಮಗೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದರು.
ಪ್ರಾಧ್ಯಾಪಕಿ ಸುಮನಾ ಅಂಗಡಿ ಮಾತನಾಡಿ, ಸಂವಿಧಾನ ರಚನೆಗೆ ಮುನ್ನ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಸಂವಿಧಾನ ಜಾರಿ ನಂತರದಲ್ಲಿ ಹೆಣ್ಣಿಗೆ ಸ್ವಾತಂತ್ರೃಲಭಿಸಿತು. ಕಡ್ಡಾಯ, ಉಚಿತ ಶಿಕ್ಷಣ ಜಾರಿಗೆ ಬಂದಿತು. ಆದರೆ ಇಂದು ಪ್ರತಿಯೊಬ್ಬರಿಗೂ ಹಕ್ಕುಗಳು ಬೇಕಾಗಿವೆ. ಕರ್ತವ್ಯಗಳು ಬೇಡವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಲಕ್ಷ್ಮೀಸಾಗರ ಗ್ರಾಪಂ ಅಧ್ಯಕ್ಷ ಜಿ.ಎನ್. ಅಶೋಕ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ, ಮುಖಂಡರಾದ ಪುನೀತ್, ಮಹೇಶ್, ಸಹಶಿಕ್ಷಕ ಬಸವನಗೌಡರು ಇದ್ದರು. ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶುಬಿರ ಏರ್ಪಡಿಸಲಾಗಿತ್ತು. ಸತ್ಯನಾರಾಯಣ ರಸಮಂಜರಿ ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮೋನಿಕಾ, ಭವ್ಯಾ ಸಂಗಡಿಗರು ಪ್ರಾರ್ಥಿಸಿದರು. ಪವನ್ ಸ್ವಾಗತಿಸಿ, ಕೋಮಲಾ ವಂದಿಸಿದರು. ಬೇಬಿ ನಿರೂಪಿಸಿದರು.