

ಬಸವಕಲ್ಯಾಣ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿವೆ ಎಂದು ನವದೆಹಲಿಯ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ನಿರ್ದೇಶಕಿ ಡಾ.ಪ್ರಿಯಾಂಕಾ ಚಂದ್ರ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಮಾನ್ಯ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಸಾರವಾಗುವ ಕೆಲಸಗಳು ನಡೆಯಲಿ ಎಂದು ಆಶಿಸಿದರು.
ಕಲ್ಯಾಣ ಭಾಗದಲ್ಲಿ ಶರಣರು, ಗುರುನಾನಕ, ಸಾಯಿಬಾಬಾ, ಸೂಫಿ-ಸಂತರು, ತತ್ವಪದಕಾರರು ಸೇರಿ ದಾರ್ಶನಿಕ ಪರಂಪರೆಯ ಹಲವರು ಬಂದು ಹೋಗಿದ್ದಾರೆ. ಸಾಮಾಜಿಕ ಸಮಾನತೆ ಪಾಠ ಮಾಡಿದ ನೆಲ ಕಲ್ಯಾಣ ವಿಶ್ವದ ಗಮನಸೆಳೆಯುವಂಥ ತಾತ್ವಿಕ ಕೇಂದ್ರವಾಗಿದೆ ಎಂದರು.
ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ, ಪರಿಷತ್‌ನಿಂದ ಬರುವ ಬಸವ ಜಯಂತಿ ಅಮೃತ ಮಹೋತ್ಸವಕ್ಕೆ ಉತ್ತರ ಮತ್ತು ದಕ್ಷಿಣ ಭಾರತ ಕಲಾವಿದರನ್ನು ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ (ಬಿಡಿಪಿಸಿ) ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ, ಅನಂತ ಚಂದ್ರ, ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ, ಬಸವೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ, ಡಾ.ಶಾಂತಲಾ ಪಾಟೀಲ, ಡಾ.ಬಸವರಾಜ ಖಂಡಾಳೆ, ಪವನ ಪಾಟೀಲ, ಸಂಗೀತಾ ಮಹಾಗಾವೆ, ಜಗದೇವಿ ಜಾವಳಗೆ, ಶ್ರೀನಿವಾಸ ಉಮಾಪುರೆ, ಗಂಗಾಧರ ಸಾಲಿಮಠ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ನಾಗವೇಣಿ ಬಿರಾದಾರ, ಸುನೀಲ್ ಮದಕಟ್ಟಿ, ಬಸವರಾಜ ಗುಂಗೆ ಉಪಸ್ಥಿತರಿದ್ದರು.
ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಬಿಡಿಪಿಸಿಯಿಂದ ಡಾ.ಪ್ರಿಯಾಂಕಾ ಚಂದ್ರ, ಡಾ. ರಾಜಕುಮಾರ ಹೆಬ್ಬಾಳೆ ಹಾಗೂ ಡಾ.ಮಹೇಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ದೇಶಾದ್ಯಂತ ನಡೆಯಲಿ ಬಸವ ಜಯಂತಿ: ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯಿಂದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಪ್ರತಿವರ್ಷ ಭಾರತಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ಆದೇಶಿಸುವುದರ ಜತೆಗೆ ಬಸವಣ್ಣನವರನ್ನು ಭಾರತದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸುವಂತೆ ಡಾ.ಪ್ರಿಯಾಂಕಾ ಚಂದ್ರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.