

ಮಳವಳ್ಳಿ: ಮನುಕುಲದಲ್ಲಿ ಸಮಾನತೆ ಹಾಗೂ ಕಾಯಕ ತತ್ವದ ಬಗ್ಗೆ ಜಾಗೃತಿ ಮೂಡಿಸಿದವರು ವಿಶ್ವಗುರು ಬಸವೇಶ್ವರರು ಎಂದು ಎಂ.ಎಲ್.ಹುಂಡಿ ಮಠದ ಪೀಠಾಧ್ಯಕ್ಷ ಶ್ರೀ ಗೌರಿಶಂಕರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿಯೇ ಜನರಲ್ಲಿದ್ದ ಅಸಮಾನತೆ ಹೋಗಲಾಡಿಸಲು ದೊಡ್ಡ ಕ್ರಾಂತಿಯನ್ನು ಬಸವಣ್ಣ ಮಾಡಿದರು. ಲಿಂಗಪೂಜೆಯಿಂದ ಆತ್ಮಶುದ್ಧಿ ಹಾಗೂ ಕಾಯಕದಿಂದ ಜೀವನ ಶುದ್ಧಿಯಾಗುವುದೆಂದು ಎಲ್ಲ ವರ್ಗದ ಜನರಿಗೆ ಮನದಟ್ಟು ಮಾಡಿದ್ದರು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಪುತ್ಥಳಿ ಹಾಗೂ ಭಾವಚಿತ್ರವನ್ನು ಸಾರೋಟಿನಲ್ಲಿರಿಸಿ ಗ್ರಾಮದಲ್ಲಿ ಬೀದಿಗಳಲ್ಲಿ ಮಂಗಳವಾದ್ಯ, ಜನಪದ ಕಲಾ ತಂಡದೊಡನೆ ಮೆರವಣಿಗೆ ನಡೆಸಲಾಯಿತು. ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕು ಅತ್ತಿವೇರಿ ಬಸವಧಾಮದ ಸದ್ಗುರು ಮಾತೆ ಬಸವೇಶ್ವರಿ ಮಾತಾಜಿ, ಚಿದರಹಳ್ಳಿ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸಹಳ್ಳಿ ಹಂಗ್ರಾಪುರ ಮಠದ ಶ್ರೀ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ರಾಗಿಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಓಂಕಾರೇಶ್ವರ ಸ್ವಾಮೀಜಿ, ಬಿದರಹಳ್ಳಿ ಮಠದ ಶ್ರೀ ಗುರುಸ್ವಾಮೀಜಿ, ಗ್ರಾಮಸ್ಥರು ಉಪಸ್ಥಿತರಿದ್ದರು.