ಸಮಾನ ಅವಕಾಶಕ್ಕಾಗಿ ಶ್ರಮಿಸಿದ್ದ ಅಂಬೇಡ್ಕರ್: ಡಾ.ಎಸ್.ತುಕಾರಾಂ

3
Published on

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗಾಗಿ ಮಾತ್ರವಲ್ಲ ಮಹಿಳೆಯರಿಗೂ ಸಮಾನ ಅವಕಾಶ, ಹಕ್ಕು ನೀಡಲು ಶ್ರಮಿಸಿದ್ದರು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರ ಡಾ.ಎಸ್.ತುಕಾರಾಂ ಬಣ್ಣಿಸಿದರು.

ಶ್ರೀನಟರಾಜ ಪ್ರತಿಷ್ಠಾನ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದಿಂದ ಹೊಸಮಠದ ನಟರಾಜ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಬಹುತೇಕ ಜನರು ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗಾಗಿ ಮಾತ್ರ ಹೋರಾಟ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅಂಬೇಡ್ಕರ್ ದೇಶದ ಎಲ್ಲ ಜಾತಿ, ಜನಾಂಗದವರ ಸರ್ವಾಂಗೀಣ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದರು. ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು, ಪತ್ನಿಯ ನಿಧನದ ನಂತರ ಆಸ್ತಿ ಹಕ್ಕು, ಗಂಡನಿಂದ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾದರೆ ವಿಚ್ಛೇಧನಕ್ಕೆ ಕಾನೂನಾತ್ಮಕ ಅವಕಾಶ, ದುಡಿಯುವ ಸ್ಥಳಗಳಲ್ಲಿ ಭದ್ರತೆ, ಹೆರಿಗೆ ಸಮಯದಲ್ಲಿ ವೇತನ ಸಹಿತ ರಜೆ ಸೇರಿದಂತೆ ಎಲ್ಲ ರೀತಿಯ ಅವಕಾಶಗಳೂ ಇರಬೇಕೆಂದು ಪ್ರತಿಪಾದಿಸಿದರು ಎಂದು ತಿಳಿಸಿದರು.

ಭಾರತದ ಮಹಿಳೆಯರಿಗಾಗಿ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ದೊರಕಿಸಿಕೊಡಲು ತಾವು ರೂಪಿಸಿದ ಮಸೂದೆಯನ್ನು ಜಾರಿಗೆ ತರಲು ಅಂದಿನ ಸರ್ಕಾರ ನಿರಾಕರಿಸಿದ ಕಾರಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಭಾರತದ ಏಕೈಕ ಮಹಿಳಾವಾದಿ ಚಿಂತಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅವರ ವಿದ್ವತ್ತು, ಕ್ರಿಯಾಶೀಲತೆ, ಸಮಾಜಕ್ಕೆ ಅವರು ಕೊಟ್ಟ ಕಾಣಿಕೆ, ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸಲು ಅವರು ನಿರ್ವಹಿಸಿದ ಪ್ರಾಮಾಣಿಕ ಶ್ರಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ದೇಶದ ವಿದ್ಯಾವಂತ ಸಮುದಾಯದ ಹಿಂದೆ ಬಿದ್ದಿದೆ ಎಂದು ವಿಷಾದಿಸಿದರು.

ಅಂಬೇಡ್ಕರ್ ಅವರ ವ್ಯಕ್ತಿತ್ವ, ಹೃದಯ, ಮಾತು ಮತ್ತು ಬರಹದಲ್ಲಿ ಪ್ರಾಮಾಣಿಕತೆ ಇತ್ತು. ಅವರ ಮಾತುಗಳು ಸಂಪೂರ್ಣ ಮಾನವ ಪರವಾಗಿದ್ದವು. ಜಾತೀಯತೆಯಿಂದ ನೊಂದ ಸಮುದಾಯಗಳಿಗೆ ಧ್ವನಿಯಾಗಿ ನಿಂತರು. ಹೀಗಾಗಿ ಅಂಬೇಡ್ಕರ್ 134 ವರ್ಷ ಕಳೆದರೂ ಪ್ರಸ್ತುತವಾಗುತ್ತಾರೆ ಎಂದು ಹೇಳಿದರು.

ಪ್ರಸ್ತುತ ಕಾಲಘಟ್ಟದಲ್ಲಿ ತೋರಿಕೆಯ ಸಮಾನತೆ ಇದೆ. ಆದರೆ, ಅಂತರಂಗದಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ. ಮಾತುಗಳಲ್ಲಿ ರಂಜನೆ ಕಾಣುತ್ತಿದೆ. ಆದರೆ, ನೈತಿಕತೆ ನಾಶವಾಗಿದೆ. ನೈತಿಕತೆ ನಾಶವಾದ ಜಾಗದಲ್ಲಿ ಅಂಬೇಡ್ಕರ್ ಇರುವುದಿಲ್ಲ. ನೈತಿಕತೆ ದೃಢವಾಗಿದ್ದಲ್ಲಿ ಮಾತ್ರ ಅಂತರಂಗ ಶುದ್ಧಿ, ಸವಾನತೆಯ ಭಾವ ಇರುತ್ತದೆ. ಮಕ್ಕಳ ಭವಿಷ್ಯದ ಬದುಕನ್ನು ರೂಪಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕ ವೃತ್ತಿಯಲ್ಲಿರುವವರು ಅಂಬೇಡ್ಕರ್ ಅವರು ಬರೆದ ಗ್ರಂಥಗಳನ್ನು ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಡ್ಯ ವಿಶ್ವವಿದ್ಯಾಲಯದ ಸರ್ ಎಂ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ.ವೆಂಕಟೇಶಮೂರ್ತಿ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಸುಮ್ಮನೆ ಪ್ರಮಾಣ ಮಾಡುವುದರಲ್ಲಿ ಪ್ರಯೋಜನವಿಲ್ಲ. ಅಲ್ಲಿನ ಆಶಯಗಳನ್ನು ಅರ್ಥ ಮಾಡಿಕೊಂಡು ಪಾಲಿಸಬೇಕು. ಎಲ್ಲರೂ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಶ್ರೀನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ, ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಪ್ರೊ.ಎಂ.ಆರ್.ಜಯಪ್ರಕಾಶ್, ಪ್ರಾಂಶುಪಾಲ ಡಾ.ಮಹೇಶ್ ದಳಪತಿ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ದಂಡೀಕೆರೆ ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net