ಸಮಾಜಸೇವಕ ಈ ಕ್ಷೌರಿಕ

14MDG2
Published on

ಮುಂಡರಗಿ: ಸಮಾಜ ಸೇವೆ ಮಾಡುವ ಮನಸ್ಸಿದ್ದರೆ ವೃತ್ತಿ ಯಾವುದಾಗಿದ್ದರೂ ಅಡ್ಡಿಯಾಗದು. ಇದಕ್ಕೆ ಪಟ್ಟಣದ ಕೆಇಬಿ ಹತ್ತಿರದ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಮಾಲೀಕ ದೇವು ಹಡಪದ ಅವರೇ ಸಾಕ್ಷಿ. ಅವರದ್ದು ಕ್ಷೌರಿಕ ವೃತ್ತಿಯ ಮನೆತನ. ದೇವು ಅವರಿಗೆ ಮೊದಲಿನಿಂದಲೂ ಸಮಾಜ ಸೇವೆ ಮಾಡಬೇಕೆಂಬ ತುಡಿತವಿತ್ತು. ಹೀಗಾಗಿ, ತಮ್ಮ ವೃತ್ತಿಯ ಜತೆಗೆ ಅಂಧರು, ಅನಾಥರು, ಅಂಗವಿಕಲರಿಗೆ ಉಚಿತ ಕ್ಷೌರ ಮಾಡುವುದು, ರಕ್ತದಾನ, ಬಡ ಮಕ್ಕಳ ಶಿಕ್ಷಣಕ್ಕೆ ಧನಸಹಾಯ ಮುಂತಾದ ಕಾರ್ಯ ಮಾಡುತ್ತ ಬಂದಿದ್ದಾರೆ. ಐದು ವರ್ಷದ ಹಿಂದೆ ಕಲ್ಪವೃಕ್ಷ ವಿವಿಧೋದ್ದೇಶ ಸೇವಾ ಫೌಂಡೇಷನ್ ಟ್ರಸ್ಟ್ ಆರಂಭಿಸಿ, ಆ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

10 ವರ್ಷಗಳಿಂದ ಮೆನ್ಸ್ ಪಾರ್ಲರ್ ನಡೆಸಿಕೊಂಡು ಬಂದಿರುವ ದೇವು, ಪ್ರತಿ ವರ್ಷ ಗದಗನ ವೀರೇಶ್ವರ ಪುಣ್ಯಾಶ್ರಮದ ಅಂಧ ಹಾಗೂ ಅನಾಥ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡುತ್ತಾರೆ. ಕರೊನಾ ಹಿನ್ನೆಲೆಯಲ್ಲಿ 2020 ರಲ್ಲಿ ಕಾರ್ಯಕ್ರಮ ರದ್ದು ಪಡಿಸಿದ್ದರು. ಸ್ವಾತಂತ್ರ್ಯೊತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿಯೂ ತಮ್ಮ ತಂಡದೊಂದಿಗೆ ಹೋಗಿ ಅನಾಥರು, ಅಂಧರು, ಅಲೆಮಾರಿಗಳಿಗೆ ಉಚಿತ ಕ್ಷೌರ ಮಾಡುತ್ತಾರೆ.

ಶಿಕ್ಷಣಕ್ಕೆ ಪ್ರೋತ್ಸಾಹ: ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಪಟ್ಟಣದ ಬಡ ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿ ಸನ್ಮಾನಿಸುತ್ತಾರೆ. ಕೈಲಾದಷ್ಟು ಹಣದ ಸಹಾಯ ಮಾಡುತ್ತಾರೆ.

ರಕ್ತದಾನಕ್ಕೂ ಸೈ

ದೇವು ಅವರು ರಕ್ತದಾನ ಮಾಡುವ ಪ್ರವೃತ್ತಿಯನ್ನೂ ಬೆಳೆಸಿಕೊಂಡಿದ್ದಾರೆ. ತಾವಷ್ಟೇ ರಕ್ತದಾನ ಮಾಡದೆ, ಯುವಕರ ತಂಡವನ್ನು ಕಟ್ಟಿಕೊಂಡು ಅಗತ್ಯವಿದ್ದವರಿಗೆ ರಕ್ತದಾನ ಮಾಡಿಸುತ್ತಾರೆ. ಈಗಾಗಲೇ ದೇವು 21 ಬಾರಿ ರಕ್ತದಾನ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ರಕ್ತದ ಅವಶ್ಯಕತೆ ಇರುವವರು ದೇವು ಅವರನ್ನು (ಮೊ.9945294839) ಸಂರ್ಪಸಬಹುದು.

ಅಂಧ, ಅನಾಥ, ಅಂಗವಿಕಲರ ಸೇವೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಹೀಗಾಗಿ ಇಂತಹ ಹಲವಾರು ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಸಹ ಕೈಜೋಡಿಸುತ್ತಿದ್ದಾರೆ. ಅಸಹಾಯಕ, ಬಡಮಕ್ಕಳಿಗೆ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇವೆ. |ದೇವು ಹಡಪದ, ಕ್ಷೌರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net