

ಮೈಸೂರು; ಸಮಾನತೆಯ ಆಧಾರದ ಮೇಲೆ ನವಭಾರತ ಕಟ್ಟಬೇಕಾದರೆ, ಭಾರತೀಯ ಸಮಾಜವಾದದ ಬಗ್ಗೆ ರಾಷ್ಟ್ರಾದ್ಯಂತ ಬೌದ್ಧಿಕ, ವೈಚಾರಿಕ ಚಿಂತನೆ ಶುರುವಾಗಬೇಕು ಎಂದು ರಾಜಕೀಯ ವಿಮರ್ಶಕ ಸುಧೀಂದ್ರ ಕುಲಕರ್ಣಿ ಹೇಳಿದರು.
ಪ್ರೊ.ಮಧು ದಂಡವತೆ ಜನ್ಮ ಶತಮಾನೋತ್ಸವದ ಅಂಗವಾಗಿ ಸಮಾಜವಾದಿ ವೇದಿಕೆ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜನತಂತ್ರದ ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ‘ಡಯೋಗ್ನೋಸ್ಟಿಕ್’ ವರದಿ ಬಿಡುಗಡೆ ಮತ್ತು ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸಮಾಜವಾದದ ಪ್ರತಿಪಾದನೆಯಲ್ಲಿ ಏನು ದೋಷಗಳು, ಎಲ್ಲಿ ತಪ್ಪಗಳಾದವು ಎಂಬುದರ ಕುರಿತು ಅಧ್ಯಯನ ಮಾಡಬೇಕು ಎಂದರು.
ಆರ್ಥಿಕ ಉದಾರೀಕರಣವನ್ನು ಸಮಾಜವಾದದ ನೆಲೆಯಲ್ಲಿ ಸ್ವೀಕರಿಸದ ಕಾಂಗ್ರೆಸ್ ದೊಡ್ಡ ತಪ್ಪು ಮಾಡಿತು. ಭಾರತದಲ್ಲಿ ಸಮಾಜವಾದ ಇಂದು ಯಾವ ಪರಿಸ್ಥಿತಿಯಲ್ಲಿದೆ ಎಂಬ ಕುರಿತು ಆಲೋಚಿಸಬೇಕು. ಸಂಸತ್ತಿನಲ್ಲಿ ಜಾತ್ಯತೀತವಾದದ ಬಗ್ಗೆ ಬಹಳ ಚರ್ಚೆ ನಡೆಯುತ್ತದೆ. ಸಮಾಜವಾದದ ಬಗ್ಗೆ ಚರ್ಚೆ ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
2014ಕ್ಕಿಂತ ಮುಂಚೆ ನರೇಂದ್ರ ಮೋದಿ ಅವರ ಪ್ರಸಿದ್ಧ ಘೋಷಣೆ, ‘ನಾನು ತಿನ್ನುವುದಿಲ್ಲ; ಇತರರಿಗೂ ತಿನ್ನಲು ಬಿಡುವುದಿಲ್ಲ’ ಎಂದಾಗಿತ್ತು. ಅವರು ತಿನ್ನುತ್ತಾರೆಂದು ಹೇಳಲು ಸಾಧ್ಯವಿಲ್ಲ. ಇತರರು ತಿನ್ನುತ್ತಿಲ್ಲವೆಂದು ಮೋದಿ ಅವರು ರಾಜ್ಯದಲ್ಲಿ ಹೇಳಲು ಸಾಧ್ಯವಿದೆಯೇ? ಇತಿಹಾಸದಲ್ಲಿ ಅತಿ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿ ಇದೆ ಎಂದು ದೂರಿದರು.
ಕಾಂಗ್ರೆಸ್ ಬಿಟ್ಟು ಅಥವಾ ಕಾಂಗ್ರೆಸ್ ಒಂದರಿಂದಲೇ ಬದಲಾವಣೆ ಸಾಧ್ಯ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಸಿದ್ಧಾಂತಗಳ ಆಧಾರದ ಮೇಲೆ ಒಕ್ಕೂಟದ ಅವಶ್ಯಕತೆ ಇದೆ. ಬಿಜೆಪಿ ನಾವೇ ಶ್ರೇಷ್ಠ ಎಂಬ ಅಹಂಕಾರದಲ್ಲಿದೆ. ಇದುವೇ ಅದಕ್ಕೆ ಮುಳುವಾಗಲಿದೆ ಎಂದು ಎಚ್ಚರಿಸಿದರು.
ಮತ್ತೆ ಬಿಜೆಪಿ ಅಧಿಕಾರ ಪಡೆದರೆ ಏನಾದೀತು? ಅದರ ಮುನ್ಸೂಚನೆಗಳು ಈಗಾಗಲೇ ಕಾಣುತ್ತಿವೆ. ಸಂವಿಧಾನದ ಮೂಲ ಆಶಯವನ್ನು ಬುಡಮೇಲು ಮಾಡಲಿದ್ದು, ಸಂವಿಧಾನದ ಪ್ರಸ್ತಾವನೆ, ಸಮಾಜವಾದ ಮತ್ತು ಜಾತ್ಯತೀತವಾದ ಕಿತ್ತು ಹಾಕಲಿದೆ ಎಂದರು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇವತ್ತು ತುರ್ತು ಪರಿಸ್ಥಿತಿ ಘೋಷಿಸದೆಯೇ ನ್ಯಾಯಾಂಗ, ಮಾಧ್ಯಮ, ಆಡಳಿತ, ಚುನಾವಣಾ ಆಯೋಗವನ್ನು ನಿಯಂತ್ರಣ ಮಾಡಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಕುತ್ತು ಬಂದಿದೆ ಎಂದು ಕಿಡಿಕಾರಿದರು.
ಭಾರತ್ ಜೋಡೋ ಯಾತ್ರೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಆದರೆ, ಸಂಘಟನಾತ್ಮಕವಾಗಿ ಆ ಪಕ್ಷ ದುರ್ಬಲವಾಗಿದೆ. ಆದ್ದರಿಂದ 2023ರ ಕರ್ನಾಟಕ ಚುನಾವಣೆ, 2024ರ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ಬೃಹತ್ ಸಮನ್ವಯದೊಂದಿಗೆ ನಡೆಯಬೇಕು ಎಂದು ತಿಳಿಸಿದರು.