

ಕಂಪ್ಲಿ: ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಗುರುವಾರ ಮಾತನಾಡಿದರು. ಅಧಿಕಾರಿಗಳು ಸಮಾಜಮುಖಿಯಾಗಿ, ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದ ಎರಡು, ಪುರಸಭೆಯ ಮೂರು, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಒಂದು ಅಹವಾಲು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ರೈತಸಂಘದ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮನವಿ ಸಲ್ಲಿಸಿ, ಪಟ್ಟಣದ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು. ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಿಸಬೇಕು. ನದಿಗೆ ಹೊಸ ಸೇತುವೆ ನಿರ್ಮಿಸಬೇಕು. ದರೋಜಿ-ಗಂಗಾವತಿ ಬ್ರಾಡ್‌ಗೇಜ್ ಸಂಪರ್ಕಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಟಿ.ಎಚ್.ಎಂ.ರಾಜಕುಮಾರ್, ಎಸ್.ವೀರಭದ್ರಪ್ಪ, ಯು.ಎಂ.ವಿದ್ಯಾಶಂಕರ್, ತುಕಾರಾಮಸಿಂಗ್ ಇತರರು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ, ಸದರಿ ಶಾಲೆ, ಕಾಲೇಜಿಗೆ ಸಂಬಂಧಿಸಿದಂತೆ ಎರಡು ವಾಣಿಜ್ಯ ಮಳಿಗೆಗಳು, 29.26 ಎಕರೆ ಜಮೀನಿದ್ದು ಸಮೀಕ್ಷೆ ಮಾಡಿಸುವುದರೊಂದಿಗೆ ಆದಾಯದ ಲೆಕ್ಕಾಚಾರ ಮಾಡಿಸಬೇಕು. ಶಾಲೆ ಕಟ್ಟಡ ಶಿಥಿಲಗೊಂಡಿದ್ದು ಅಭಿವೃದ್ಧಿಪಡಿಸಬೇಕು ಆಗ್ರಹಿಸಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.