

ಸವದತ್ತಿ: ಪ್ರತಿಯೊಬ್ಬ ವಿದ್ಯಾರ್ಥಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಸಮಾಜಮುಖಿ ಸೇವೆಗಳಲ್ಲಿ ತೊಡಗಬೇಕು ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ.ಎಸ್. ಕೌಜಲಗಿ ಹೇಳಿದರು.
ಸ್ಥಳೀಯ ಕುಮಾರೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನವಿದ್ದರೂ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವಾವಲಂಬಿಯಾಗಿ ಬದುಕಬೇಕು. ಆಸೆಯೇ ದುಃಖಕ್ಕೆ ಮೂಲ ಎಂಬುವುದನ್ನು ವಿದ್ಯಾರ್ಥಿಗಳು ಅರಿಯಬೇಕು. ದುಶ್ಚಟಗಳಿಂದ ದೂರವಿದ್ದು, ಸದ್ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಭಾವನೆ ದೂರವಾಗಬೇಕು ಹಾಗೂ ಸಮಯ ಪ್ರಜ್ಞೆ, ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು ಎಂದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕೆ.ಬಿ. ಕೋರಿ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಜತೆಗೆ ಸಮಾಜಮುಖಿ ಚಿಂತನೆಗಳನ್ನು ಮಾಡಬೇಕು. ತಂದೆ-ತಾಯಿಗೆ ಋಣಿಯಾಗಿರಬೇಕು ಎಂದರು. ಕುಮಾರೇಶ್ವರ ಎಜುಕೇಷನ್ ಸೊಸೈಟಿ ನಿರ್ದೇಶಕ ಬಸವರಾಜ ಹೂಲಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ಬಡಮ್ಮನವರಗೆ ಅದರ್ಶ ವಿದ್ಯಾರ್ಥಿ ಹಾಗೂ ಕಲ್ಪನಾ ಜ್ಯೋತಿ, ಲಕ್ಷ್ಮೀ ಲಮಾಣಿ ಅವರನ್ನು ಆದರ್ಶ ವಿದ್ಯಾರ್ಥಿನಿಯರೆಂದು ಘೋಷಿಸಲಾಯಿತು. ಸಿ.ಜಿ. ಸವಟಗಿ, ಬಸವರಾಜ ಅಕ್ಕಿ, ಜಿ.ಎಸ್. ಶಿಂಧೆ, ಎನ್.ಬಿ. ಚಂದರಗಿ, ಎನ್.ಎಲ್. ಕಳ್ಳಿ, ಶ್ರೀರಕ್ಷಾ ಮೇದಾರ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪನ್ಯಾಸಕ ಎಸ್.ಕೆ. ಕಂಬಾಳಿಮಠ ನಿರೂಪಿಸಿದರು. ಎಚ್.ಬಿ. ಭಜಂತ್ರಿ ಸ್ವಾಗತಿಸಿದರು. ಕೆ.ಎಂ. ಹುಣಶಿಕಟ್ಟಿ ವಂದಿಸಿದರು.