

ಚಿಕ್ಕಮಗಳೂರು: ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಮುಖಿ ಸೇವಾ ಕೆಲಸ ಮಾಡಲು ಲಯನ್ಸ್ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದು ಲಯನ್ಸ್ ಕ್ಲಬ್ ಪ್ರಥಮ ಉಪ ರಾಜ್ಯಪಾಲ ಎಚ್.ಎಂ. ತಾರಾನಾಥ್ ತಿಳಿಸಿದರು.
ನಗರದ ಮಧುವನ ಬಡಾವಣೆಯಲ್ಲಿರುವ ಲಯನ್ಸ್ ಸೇವಾ ಭವನದಲ್ಲಿ ನಡೆದ ಲಯನ್ಸ್ ಕ್ಲಬ್‌ನ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿ ಮಾತನಾಡುತ್ತಿದ್ದರು.
ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಆರಂಭವಾಗಿ ೫೦ ವಸಂತಗಳನ್ನು ಪೂರೈಸಿದೆ. ಇದರ ಸವಿ ನೆನಪಿಗಾಗಿ ಕಳೆದ ವರ್ಷ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಸವಿ ನೆನಪಿಗಾಗಿ ಅತ್ಯಂತ ಸುಂದರ ಹಾಗೂ ಸುಸಜ್ಜಿತವಾದ ಭವನವನ್ನು ನಿರ್ಮಾಣ ಮಾಡುವ ಮೂಲಕ ಈ ಲಯನ್ ಸಂಸ್ಥೆ ಬೇರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಇದರ ನಿರಂತರ ಬೆಳವಣಿಗೆಗೆ ಹಿರಿಯ ಶ್ರಮ, ಸಹಕಾರ ಕಾರಣವಾಗಿದೆ. ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಈಗ ಆಯ್ಕೆಯಾಗಿರುವ ಹೊಸ ಪದಾಧಿಕಾರಿಗಳು ಸಂಕಲ್ಪ ಮಾಡುವಂತೆ ಮನವಿ ಮಾಡಿದರು.
ಕಳೆದ ವರ್ಷ ಅಧ್ಯಕ್ಷರಾಗಿದ್ದ ಕೆ. ಪುಷ್ಪರಾಜ್ ಅಧ್ಯಕ್ಷರಾದ ಅವಧಿಯಲ್ಲೂ ಕೂಡ ಸಂಸ್ಥೆ ಅತ್ಯಂತ ಉತ್ತಮವಾಗಿ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೇರುವ ಕೆಲಸ ಮಾಡಬೇಕು ಎಂದು ಹೇಳಿದರು.
ಲಯನ್ಸ್ ಸುವರ್ಣ ಭವನ ನಿರ್ಮಾಣ ಸಮಿತಿ ಅಧ್ಯಕ್ಷ, ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಲಯನ್ಸ್ ಸುವರ್ಣ ಭವನ ನಿರ್ಮಾಣದ ಜೊತೆಗೆ ಈ ನೂತನ ಕಟ್ಟಡದಲ್ಲಿ ಲಯನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ ಈ ಸಂಸ್ಥೆಯ ಪಿತಾಮಹ ಮೆಲ್ವಿನ್ ಝೋನ್ ಅವರ ಪುತ್ಥಳಿಯನ್ನು ಇದೇ ಕಟ್ಟಡದಲ್ಲಿ ಸ್ಥಾಪನೆ ಮಾಡಬೇಕೆಂಬುದು ತಮ್ಮ ಕನಸಾಗಿದೆ. ಈ ಕಾರ್ಯವನ್ನು ಈ ಹಿಂದೆ ಅಧ್ಯಕ್ಷರಾಗಿದ್ದ ಜಿ. ರಮೇಶ್ ಮತ್ತವರ ತಂಡ ಸಾಕಾರಗೊಳಿಸಿದ್ದು ತಮಗೆ ಸಂತಸ ತಂದಿದೆ ಎಂದರು.
ಲಯನ್ಸ್ ಸಂಸ್ಥೆಯ ಪೂರ್ವಾಧ್ಯಕ್ಷ ಕೆ. ಪುಷ್ಪರಾಜ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕೆಳೆದ ೫೦ ವರ್ಷಗಳನ್ನು ಪೂರ್ಣಗೊಳಿಸಿ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಲಯನ್ಸ್ ಜಿಲ್ಲೆಯಲ್ಲೇ ಚಿಕ್ಕಮಗಳೂರು ಕ್ಲಬ್ ೫ನೇ ಸ್ಥಾನಕ್ಕೇರಿದ್ದು, ಇದಕ್ಕೆ ಲಯನ್ಸ್ ಸಂಸ್ಥೆ ಹಿರಿಯರ ಸಹಕಾರ ಕಾರಣವಾಗಿದೆ. ಇದಕ್ಕಾಗಿ ಕ್ಲಬ್‌ನ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಎನ್. ಕುಮಾರ್ ಮಾತನಾಡಿ, ಲಯನ್ಸ್ ಕ್ಲಬ್‌ನ ೨೦೨೫-೨೬ನೇ ಸಾಲಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯ ಸಹಕಾರ ಮತ್ತು ಮಾರ್ಗದರ್ಶನದಂತೆ ಕೆಲಸ ಮಾಡುವುದರ ಜೊತೆಗೆ ಲಯನ್ಸ್ ಕ್ಲಬ್‌ನ ಆಶಯಗಳಿಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಲಯನ್ಸ್ ಮಾಜಿ ಗವರ್ನರ್ ಎಚ್.ಆರ್. ಹರೀಶ್, ಲಯನ್ಸ್ ಸೇವಾ ಟ್ರಸ್ಟ್ನ ಅಧ್ಯಕ್ಷ ಎಚ್.ಸಿ. ಶಶಿಪ್ರಸಾದ್ ಮಾತನಾಡಿದರು. ಲಯನ್ಸ್ ಕ್ಲಬ್ ರೀಜನಲ್ ಛರ‍್ಮನ್ ಬಿ.ಎನ್. ವೆಂಕಟೇಶ್, ಪ್ರಾಂತೀಯ ಅಧ್ಯಕ್ಷ ಯು.ಎಂ. ರಾಮ್‌ಪ್ರಸಾದ್, ಲಯನ್ ಗೋಪಾಲಗೌಡ, ಲಯನ್ ಬಿ.ಎನ್. ಚಂದ್ರೇಗೌಡ, ಲಯನ್ ಪೂರ್ವ ಖಜಾಂಚಿ ಎಂ.ಎA. ಗಿರೀಶ್, ಲಯನ್ಸ್ ಕ್ಲಬ್ ಖಜಾಂಚಿ ಬಿ.ಎಚ್. ಪರಮೇಶ್ವರಪ್ಪ ಉಪಸ್ಥಿತರಿದ್ದರು.