ಸಮಾಜಮುಖಿ ಬರಹಕ್ಕೆ ಮಹತ್ವ ಹೆಚ್ಚು

Book
Published on

ಚಿತ್ರದುರ್ಗ: ಸಮಾಜಮುಖಿ ಬರಹಕ್ಕೆ ಮಹತ್ವ ಹೆಚ್ಚು. ಹೀಗಾಗಿ ಆ ಚಿಂತನೆಯ ಹಾದಿಯಲ್ಲೇ ಸಾಗಬೇಕು ಎಂದು ಕವಿ ಲೋಕೇಶ್ ಅಗಸನಕಟ್ಟೆ ಸಲಹೆ ನೀಡಿದರು.

ಲುಂಬಿನಿ ಪ್ರಕಾಶನ, ಅಂಬೇಡ್ಕರ್ ವಿಚಾರ ವೇದಿಕೆಯಿಂದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಶೋಕ ಅಗಿಲ್‌ರ ನದಿಯ ಹುಡುಕಾಟ, ಎಸ್.ಕೆ.ಮಂಜುನಾಥ್‌ರ ಗಾಳಿಯ ಎದೆ ಸೀಳಿ ಹೊರಟ ಹಕ್ಕಿ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಆತಂಕ, ತಲ್ಲಣ, ಬಿಕ್ಕಟ್ಟಿನ ವಿಷಮ ಸ್ಥಿತಿಯಲ್ಲಿ ಬರವಣಿಗೆ ಆರಂಭಿಸುವುದು ದೊಡ್ಡ ಸವಾಲಾಗಿದೆ. ವೇದಾಂತ, ನಂಬಿಕೆ ಸಂಘರ್ಷಕ್ಕೆ ಸಿಲುಕಿವೆ. ಹೀಗಾಗಿ ಅರ್ಹವಲ್ಲದ ಸಿದ್ಧಾಂತವನ್ನು ಕುರುಡಾಗಿ ನಂಬುತ್ತಿದ್ದೇವೆ. ಎಲ್ಲೆಡೆ ರಾಜಕೀಯ ಪ್ರೇರಿತ ಮಾತು ಹೆಚ್ಚುತ್ತಿವೆ ಎಂದು ವಿಷಾದಿಸಿದರು.

ಮನಸ್ಸಿನ ಅಂತಃಕರಣದ ಧ್ವನಿ ಸರಿಯಾದ ದಾಟಿಯಲ್ಲಿ ದಾಖಲಾಗಲು ಸಂಗತಿ ಮೇಲಿನ ಕಳಕಳಿ, ಪ್ರೀತಿಯೊಂದಿಗೆ ಸಾಹಿತ್ಯ ವಿಚಾರದ ಕೆಲಸ ಪೂರ್ಣಗೊಳಿಸಬೇಕು. ಬರೆದ ವಿಚಾರ ಜನ ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಆನಂತರ ನಿರ್ಧಾರವಾಗುತ್ತದೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಇನ್ನಿತರೆ ಮಹನೀಯರು ಜಾತಿ ಸಂಕೋಲೆ ಮೀರಿ ವಿಶ್ವಕ್ಕೆ ಏಕತೆಯ ಸಂದೇಶ ಸಾರಿದರು. ಅದರೊಳಗೆ ನಮ್ಮನ್ನು ಸಿಲುಕಿಸಬೇಡಿ ಎಂದು ಹೇಳಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಎಲ್ಲರನ್ನು ಜಾತಿಗೆ ಸೀಮಿತಗೊಳಿಸಿ ಅವರ ಮೂಲ ಆಶಯಕ್ಕೆ ಧಕ್ಕೆ ತರುವ ಕೆಲಸವಾಗುತ್ತಿದೆ ಎಂದು ಬೇಸರಿಸಿದರು.

ಕಾವ್ಯ ತನ್ನ ತನ ಕಳೆದುಕೊಂಡು ಗತಕಾಲಕ್ಕೆ ಸರಿಯಬಾರದು. ಯಾವಾಗಲೂ ಪ್ರಸ್ತುತವಾಗಿ, ಮನುಷ್ಯನ ಪದವಾಗಿ ಉಸಿರಾಡಬೇಕು. ಬೇಂದ್ರೆ ಸೇರಿ ಅನೇಕರ ಕವಿತೆಗಳೇ ಇದಕ್ಕೆ ಉತ್ತಮ ನಿದರ್ಶನ. ಕವಿತೆಯ ಸಾಲುಗಳು ಸಂಕೀರ್ಣತೆಯಿಂದ ಕೂಡಿರದೆ, ಆನಂದದಿಂದ ಮನಸ್ಸಿನ ಅಂತರಾಳಕ್ಕೆ ಸರಾಗವಾಗಿ ಇಳಿಯುವಂತಿರಬೇಕು ಎಂದು ಸಲಹೆ ನೀಡಿದರು.

ಕವಿ ಬಿ.ಎಂ.ಗುರುನಾಥ್ ಮಾತನಾಡಿ, ಸಾಹಿತಿ ಲಂಕೇಶ್ ದಲಿತರು ಚೆನ್ನಾಗಿ ಬರೆಯಬೇಕೆಂದು ಸದಾ ಹೇಳುತ್ತಿದ್ದರು. ಅವರ ಮಾತಿನಂತೆ ಯುವ ಸಾಹಿತಿಗಳು ಸಾಗಬೇಕು. ನಮ್ಮ ಬರಹ ಸತ್ಯ ಸಂಗತಿ, ಉತ್ತಮ ಸಮಾಜ ನಿರ್ಮಾಣದ ಧ್ಯೇಯೋದ್ದೇಶ ಹೊಂದಿರಬೇಕು ಎಂದು ಸಲಹೆ ನೀಡಿದರು.

ಕುವೆಂಪು, ಬೇಂದ್ರೆ, ಕಾರಂತ, ತೇಜಸ್ವಿ ಅವರ ಸಾಹಿತ್ಯದ ಮಾದರಿಯನ್ನೇ ಪ್ರಸ್ತುತ ದಿನಗಳಲ್ಲಿ ಬರಹಗಾರರು ಅನುಸರಿಸಬೇಕು. ಆಗ ಮಾತ್ರ ಎಲ್ಲದಕ್ಕೂ ಉತ್ತರ ನೀಡಲು ಸಾಧ್ಯ ಎಂದರು.

ಪತ್ರಕರ್ತ ಉಜ್ಜಿನಪ್ಪ, ಚಿಂತಕ ಪ್ರೊ.ಬಿ.ಎಲ್.ರಾಜು, ರಂಗ ನಿರ್ದೇಶಕ ಧೀಮಂತರಾಮ್, ಕವಿಗಳಾದ ಆನಂದ ಋಗ್ವೇದಿ, ಸಹಾಯಕ ಪ್ರಾಧ್ಯಾಪಕ ಕೆ.ಚಂದ್ರಪ್ಪ, ಉಪನ್ಯಾಸಕ ಎಂ.ವೇದಾಂತ ಏಳಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net