ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪ್ರತಿಯೊಬ್ಬರು ಸಮಾಜಮುಖಿಯಾಗಿ ಕಾರ್ಯ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ವಾಣಿಜ್ಯ ತೆರಿಗೆಗಳ ಇಲಾಖೆಯ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಹೇಳಿದರು.
ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ ಉಣಕಲ್ಲದ ಸೆಪ್ಟೆಂಬರ್ ಮಾಸಿಕ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಸೇವೆಯೇ ಮೋಕ್ಷಕ್ಕೆ ಸಾಧನ ಕುರಿತು ಉಪನ್ಯಾಸ ನೀಡಿದ ಅವರು ಪ್ರತಿಯೊಬ್ಬರು ಸಮಸ್ಯೆಗಳನ್ನು ಎದುರಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕೆಂದರು.
ಧರ್ಮ, ಅರ್ಥ, ಕಾಮ, ಮೋಕ್ಷ ನಾಲ್ಕು ಪುರುಷಾರ್ಥಗಳ ಕುರಿತು ವಿವರಿಸಿದರು. ಸ್ವಾಮಿ ವಿವೇಕಾನಂದ, ಕನಕದಾಸರು, ಅಬ್ದುಲ್ ಕಲಾಂ ಮುಂತಾದವರ ಜೀವನದಿಂದ ಪ್ರೇರಣೆ ಪಡೆಯಬೇಕು. ಹಿರಿಯ ನಾಗರಿಕರು ತಮ್ಮ ಅನುಭವಗಳನ್ನು ಕಿರಿಯರೊಂದಿಗೆ ನಿರಂತರವಾಗಿ ಹಂಚಿಕೊಳ್ಳಬೇಕೆಂದರು.
ಹಿರಿಯ ನಾಗರಿಕರು, ಅನಾಥರು, ನಿರ್ಗತಿಕರು, ಕಷ್ಟ ಜೀವಿಗಳಿಗೆ ಸಹಾಯ, ಸೌಲಭ್ಯಗಳನ್ನು ಒದಗಿಸಿ ಜೀವನದಲ್ಲಿ ಸಾರ್ಥಕತೆ ಕಾಣಬೇಕೆಂದರು. ಸೇವೆಯಿಂದ ಆನಂದವು ಹೆಚ್ಚುತ್ತದೆ. ಮಹಾತ್ಮರು ಸೇವೆಗಳಲ್ಲಿಯೇ ಭಗವಂತನನ್ನು ಕಂಡ ಉದಾಹರಣೆಗಳನ್ನು ಹೇಳಿದರು. ಗೋವಿಂದಪ್ಪ ಗೌಡಪ್ಪಗೋಳ ಅವರನ್ನು ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.
ಕ್ಲಬ್ ಅಧ್ಯಕ್ಷ ಡಾ. ಎಂ.ಬಿ. ಸಜ್ಜನರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಬಿ. ಅಂಕಲಿ ಪರಿಚಯಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಬಿ.ವಿ. ಹಳೇಮನಿ ವಂದಿಸಿದರು. ಸದಸ್ಯರಾದ ಎಸ್.ಎಸ್. ಕರಡಿ ಪ್ರಾರ್ಥಿಸಿದರು. ನಿರ್ದೇಶಕ ಡಾ.ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು.