

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಜಯಂತ್ಯುತ್ಸವ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಂಬಿಸಿಕೊಳ್ಳುತ್ತಿರುವ ದಲಿತ ಸೇನೆಯವರನ್ನು ಸಮಾಜದಿಂದಲೇ ದೂರ ಇಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹಿರಿಯ ದಲಿತ ಮುಖಂಡ ಡಾ.ವಿಠಲ್ ದೊಡ್ಡಮನಿ ತಿಳಿಸಿದರು.
ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಬೇಕಾಬಿಟ್ಟಿ ಹೋರಾಟ ಮಾಡುತ್ತ, ಬ್ಲಾÈಕ್‌ಮೇಲ್ ಮಾಡುತ್ತ ಸಮಾಜದ ಹೆಸರನ್ನು ಹಾಳು ಮಾಡುತ್ತಿದ್ದು, ಇದೀಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಿಲ್ಲಾ ಮಟ್ಟದ ಜಯಂತ್ಯುತ್ಸವ ಸಮಿತಿಗೆ ಫೆ.೨೪ರಂದು ಸ್ವಯಂ ಘೋಷಿತ ಜಿಲ್ಲಾಧ್ಯಕ್ಷರನ್ನು ಮಾಡಿಕೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಮಾ.೩ರಂದು ಸಭೆ: ಸ್ವಯಂ ಘೋಷಿತ ಅಧ್ಯಕ್ಷರನ್ನು ಮಾಡಿಕೊಂಡು ಸಮಾಜದವನ್ನು ಒಡೆಯುವ ದುಸ್ಸಾಹಸವನ್ನು ಮಾಡಿದ್ದಾರೆ. ಇಡೀ ಸಮಾಜವನ್ನು ದೂರ ಇಟ್ಟು, ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಈ ಕುರಿತು ಚರ್ಚಿಸಲು ನಗರದ ರಾಜಾಪುರದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಮಾ.೩ರಂದು ಬೆಳಗ್ಗೆ ೧೦.೩೦ಕ್ಕೆ ಸಮಾಜದ ಚಿಂತಕರು, ಪತ್ರಕರ್ತರು, ನ್ಯಾಯವಾದಿಗಳು, ಹಿರಿಯರು, ಸಾಹಿತಿಗಳ ಸಮ್ಮುಖದಲ್ಲಿ ನೂತನ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ೨೦೨೩ರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ದಿನೇಶ ದೊಡ್ಡಮನಿ ತಿಳಿಸಿದರು.
ನಿಯಮದ ಪ್ರಕಾರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷರು ಸಭೆ ಕರೆದು, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ದಲಿತ ಸೇನೆಯವರು ಸಮುದಾಯದ ಮಾತನ್ನು ಮೀರಿಯೂ ಒಂದು ವೇಳೆ ಜಯಂತ್ಯುತ್ಸವ ಆಚರಣೆಗೆ ಮುಂದಾದರೆ ಪರಿಣಾಮ ನೆಟ್ಟಗೆ ಇರಲ್ಲ ಎಂದು ಎಲ್ಲ ಮುಖಂಡರು ಎಚ್ಚರಿಕೆ ನೀಡಿದರು.
ದಲಿತ ಮುಖಂಡರಾದ ಗುಂಡಪ್ಪ ಲಂಡನಕರ್, ಬಾಬು ವಂಟಿ, ಅಂಬಾರಾಯ ಅಷ್ಠಗಿ, ಗಣೇಶ ವಳಕೇರಿ, ಎಸ್.ಎಸ್.ತಾವಡೆ, ಪ್ರಕಾಶ ಮೂಲಭಾರತಿ, ದೇವಿಂದ್ರ ಸಿನ್ನೂರ, ರಾಹುಲ್ ಉಪಾರೆ, ವಿಶಾಲ್ ದರ್ಗಿ, ವಿಶಾಲ ನವರಂಗ, ಅವಿನಾಶ ಗಾಯಕವಾಡ, ಪ್ರಕಾಶ ಅವರಾದಕರ್, ಶ್ರೀನಿವಾಸ ಲಾಖೆ, ದಿನೇಶ ದೊಡ್ಮನಿ, ಡಿ.ಕೆ.ಮದನಕರ ಇತರರಿದ್ದರು.