ಸಮಾಜದಲ್ಲಿ ಹೋಂ ಗಾರ್ಡ್ಸ್‌ಗಳ ಸೇವೆ ಅನನ್ಯ:ನ್ಯಾ.ಬಿ.ಕೆ.ರವಿಕಾಂತ್

ಸಮಾಜದಲ್ಲಿ ಹೋಂ ಗಾರ್ಡ್ಸ್‌ಗಳ ಸೇವೆ ಅನನ್ಯ:ನ್ಯಾ.ಬಿ.ಕೆ.ರವಿಕಾಂತ್
Published on

ಹಾಸನ: ಸೈನಿಕರು ಗಡಿಯಲ್ಲಿ ದೇಶವನ್ನು ಹೇಗೆ ರಕ್ಷಣೆ ಮಾಡುತ್ತಿದ್ದಾರೋ ಅದೇ ರೀತಿ ಸಮಾಜವನ್ನು ಪೊಲೀಸರು ಮತ್ತು ಗೃಹ ರಕ್ಷಕ ದಳದ ಜತೆ ನಾವು ರಕ್ಷಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ಕೆ.ರವಿಕಾಂತ್ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಗೃಹ ರಕ್ಷಕ ದಳದಿಂದ ಶನಿವಾರ ಏರ್ಪಡಿಸಿದ್ದ 61ನೇ ಗೃಹ ರಕ್ಷಕ ದಳದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ ದೇಶದ ಪ್ರತಿಯೊಬ್ಬರೂ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ ಕೇವಲ ಪೊಲೀಸರ ಜವಾಬ್ದಾರಿಯಲ್ಲ. ಗೃಹ ರಕ್ಷಕರೂ ಸಹ ಅಷ್ಟೇ ನಿಷ್ಠೆಯಿಂದ ಕೆಲಸ ಮಾಡುತ್ತಾರೆಂಬುದು ಹಲವು ನಿದರ್ಶನಗಳ ಮೂಲಕ ಸಾಬೀತಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಎಷ್ಟು ಸಾಧ್ಯವೋ ಅಷ್ಟು ಕೊಡುಗೆಯನ್ನು ನೀಡಬೇಕಾಗುತ್ತದೆ. ರಾಷ್ಟ್ರ ನಮಗೆ ಏನು ಕೊಟ್ಟಿದೆ ಎಂದು ಯೋಚಿಸುವ ಮೊದಲು ದೇಶಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬುದರ ಕುರಿತು ಯೋಚಿಸಬೇಕಾಗುತ್ತದೆ. ರಾಷ್ಟ್ರ ರಕ್ಷಣೆಯು ಎಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರು ಮಾತನಾಡಿ, ಗೃಹರಕ್ಷಕ ದಳ ಸ್ವತಂತ್ರ ಸಂಸ್ಥೆಯಾಗಿದ್ದು, ಇಲ್ಲಿನ ಸಿಬ್ಬಂದಿ ಕಾರ್ಯವೈಖರಿ ಮೆಚ್ಚುವಂತಹುದು. ತುರ್ತು ಸಂದರ್ಭದಲ್ಲಿ ಮಾತ್ರ ಹೋಂ ಗಾರ್ಡ್ಸ್‌ಗಳ ನೆರವನ್ನು ಇಲಾಖೆ ಪಡೆಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೃಹ ರಕ್ಷಕ ದಳದ ಕೆಲಸವು ಹೆಚ್ಚಿದೆ. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಗೃಹ ರಕ್ಷಕ ದಳದ ಸಿಬ್ಬಂದಿಯೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ನಿಷ್ಠೆಯಿಂದ ವಹಿಸಿರುವ ಕೆಲಸವನ್ನು ಮಾಡುವ ಹೋಂ ಗಾರ್ಡ್ಸ್‌ಗಳನ್ನು ನಾನು ನೋಡಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಭದ್ರತಾ ಕಾರ್ಯಕ್ಕೆ ತೆರಳಿದ್ದ ಜಿಲ್ಲೆಯ 320 ಗೃಹ ರಕ್ಷಕ ದಳದ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಎಚ್.ಎಲ್.ಧಮೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net