

ಹಾಸನ: ಸಮಾಜದಲ್ಲಿ ಏನಾದರೂ ಬದಲಾವಣೆ ತರುವಂತಿದ್ದರೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಎಂ.ಜಿ. ರಸ್ತೆ) ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶಶಿಕುಮಾರ್ ತಿಳಿಸಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನಲ್ಲಿ ಈಚೆಗೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದ್ದು, ಹೊಸ ಮತದಾನಕ್ಕೆ ಅರ್ಹ ಇರುವವರು ಸೇರಿದಂತೆ ಯುವಕರೆಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಸಂವಿಧಾನದ ಪ್ರಮುಖ ಅಂಗವಾದ ಶಾಸಕಾಂಗದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಯುವಕರು ಮತದಾನ ಮಾಡುವುದರ ಜೊತೆ ಜೊತೆಗೆ ಜನ ಸಾಮಾನ್ಯರನ್ನು ಮತದಾನದಲ್ಲಿ ಭಾಗವಹಿಸುವಂತೆ ಜಾಗೃತರನ್ನಾಗಿ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಮತದಾನ ಮಾಡುವುದೆಂದರೆ ಅದು ದೇಶದ ಅತ್ಯಂತ ದೊಡ್ಡ ಹಬ್ಬವಿದ್ದಂತೆ. ಚುನಾವಣೆ ಆರಂಭವಾಗಿ ಮುಗಿಯುವ ವರೆಗೆ ಚುನಾವಣಾ ಆಯೋಗ ಮತದಾನದಲ್ಲಿ ಭಾಗವಹಿಸುವಂತೆ ಮಾಡಲು ಹಲವು ಬಗೆಯಲ್ಲಿ ಜಾಹಿರಾತನ್ನು ನೀಡಿ ಯುವಕರನ್ನು ಜಾಗೃತರನ್ನಾಗಿ ಮಾಡುತ್ತಿದೆ. ಇದರ ಬದಲಾಗಿ ಯುವಕರೇ ಸ್ವಯಂ ಪ್ರೇರಿತರಾಗಿ ಮತದಾನದಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ಐ.ಕ್ಯೂ.ಎ.ಸಿ. ಸಂಚಾಲಕಿ ಡಿ.ಜೆ. ರಮ್ಯ, ಉಪನ್ಯಾಸಕ ಸಿ. ಶಿವಪ್ಪ ಹಾಗೂ ಇತರರು ಹಾಜರಿದ್ದರು.