

ಬಸವಕಲ್ಯಾಣ: ಕಾನೂನು ಸುವ್ಯವಸ್ಥೆ ಮತ್ತು ದೇಶದ ಪ್ರಗತಿಯಲ್ಲಿ ನ್ಯಾಯಾಂಗದ ಪ್ರಮುಖ ಪಾತ್ರವಿದೆ ಎಂದು ಹೈಕೋರ್ಟ್ ಮತ್ತು ಬೀದರ್ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಹೇಳಿದರು.
ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಡಿ ಶನಿವಾರ ಹಳೇ ತಹಸಿಲ್ ಸ್ಥಳದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಬೀದರ್ ಜಿಲ್ಲೆಯ ದೊಡ್ಡ ತಾಲೂಕು ಬಸವಕಲ್ಯಾಣ ವೇಗವಾಗಿ ಬೆಳೆಯುತ್ತಿದ್ದು, ಸುಸಜ್ಜಿತ ಕೋರ್ಟ್ ನಿರ್ಮಾಣದ ಅಗತ್ಯವನ್ನು ಮನಗಂಡು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮ, ರಾಜ್ಯ, ದೇಶ ಪ್ರಗತಿ ಆಗಬೇಕಾದರೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹೀಗೆ ಎಲ್ಲ ಅಂಗಗಳ ಬೆಳವಣಿಗೆ ಅಗತ್ಯ. ನ್ಯಾಯಾಂಗ ಬೆಳವಣಿಗೆಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಸಹಕಾರ ನೀಡುತ್ತಿದೆ. ಹೊಸ ಕೋರ್ಟ್ ಸಂಕೀರ್ಣದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸದ್ಯ ನೆಲ ಮತ್ತು ಮೊದಲ್ಮಹಡಿ ನಿರ್ಮಿಸಲಾಗುತ್ತಿದೆ. 25 ಅಥವಾ 50 ವರ್ಷದ ಮುಂದಾಲೋಚನೆ ಇಟ್ಟುಕೊಂಡು ಅಭಿವೃದ್ಧಿಪಡಿಸುವ ಅಗತ್ಯವಿದೆ. ಡಿಜಿಟಲ್ ಮತ್ತು ಫೋರೆನ್ಸಿಕ್ ಸೈನ್ಸ್ ಜಾಸ್ತಿ ಅಳವಡಿಕೆಗೆ ಸಂಬAಧಿಸಿದ ಸಲಕರಣೆ ಒದಗಿಸಲು ಯೋಜಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಎಂ. ಆನಂದಶೆಟ್ಟಿ ಮಾತನಾಡಿ, ವರ್ಷದ ಹಿಂದೆ ಆಗಮಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಇಲ್ಲಿನ ಸ್ಥಿತಿ ನೋಡಿ ಅವಿರತ ಪ್ರಯತ್ನ ಮಾಡಿದ್ದರ ಫಲವಾಗಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪ, ಬಸವಕಲ್ಯಾಣ ವಕೀಲರ ಸಂಘದ ಅಧ್ಯಕ್ಷ ಭೀಮಾಶಂಕರ ಕುರಕೊಟ್ಟೆ, ಕಾರ್ಯದರ್ಶಿ ಎಸ್.ಬಿ. ಮಾಶಾಳಕರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಗ್ರೇಡ್-2 ತಹಸೀಲ್ದಾರ್ ರಮೇಶ ಆಲು, ಹುಲಸೂರು ತಹಸೀಲ್ದಾರ್ ಶಿವಾನಂದ ಮತ್ರೆ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಎಂ. ಸಗರ, ಸಹ ಕಾರ್ಯದರ್ಶಿ ಈಶ್ವರ ಗಾಯಕವಾಡ, ಖಜಾಂಚಿ ತುಕ್ಕಪ್ಪ ಮಾಲಗಾರ ಇತರರಿದ್ದರು.
ನ್ಯಾಯವಾದಿ ರಾಜಕುಮಾರ ಮುಡಬೆ ನಿರೂಪಣೆ ಮಾಡಿದರು. ನಿಂಗಮ್ಮ ಪ್ರಾರ್ಥನಾಗೀತೆ, ಈರಾ ಪಬ್ಲಿಕ್ ಶಾಲೆ ಮಕ್ಕಳು ನಾಡಗೀತೆ ಹಾಡಿದರು.