

ಬಸವಕಲ್ಯಾಣ: ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಜತೆಗೆ ಜಾಗೃತಿ ಮೂಡಿಸುವಲ್ಲಿ ಪತ್ರಿಕಾರಂಗ ಮಹತ್ವದ ಪಾತ್ರ ವಹಿಸುತ್ತಿದೆ. ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಪತ್ರಕರ್ತರು ಮಾಡುತ್ತಿದ್ದಾರೆ. ಅವರಿಗೆ ಸಮಾಜದಲ್ಲಿ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವಾತಡೆ ಫೌಡೇಷನ್ ಅಧ್ಯಕ್ಷ, ಬಿಜೆಪಿ ಮುಖಂಡ ಪ್ರದೀಪ ವಾತಾಡೆ ಹೇಳಿದರು.
ನಗರದಲ್ಲಿ ವಾತಡೆ ಫೌಂಡೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೇಖನಿ ಖಡ್ಗಕ್ಕಿಂತ ಹರಿತವಾದದ್ದು, ಇದರಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳು ಆಗಿವೆ ಎಂದರು.
ಕಳೆದ ಏಳು ವರ್ಷಗಳಿಂದಲೂ ಫೌಂಡೇಷನ್ ವತಿಯಿಂದ ಸಾಮಾಜಿಕ ಕಾರ್ಯಗಳು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಪಾಟೀಲ್ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹೆಚ್ಚಳವಾಗುತ್ತದೆ ಎಂದು ಹೇಳಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕಲ್ಯಾಣರಾವ ಮದರಗಾಂವಕರ್ ಮಾತನಾಡಿ, ಕರೊನಾ ಸಂಕಷ್ಟದ ಸಮಯದಲ್ಲಿ ಜೀವನದ ಹಂಗು ತೊರೆದು ಪತ್ರಕರ್ತರು ಕಾರ್ಯನಿರ್ವಹಿಸಿದ್ದಾರೆ ಎಂದರು.
ಬಿಜೆಪಿ ನಗರ ಮಾಜಿ ಅಧ್ಯಕ್ಷ ಶಿವಪುತ್ರ ಗೌರ ಮಾತನಾಡಿದರು. ಪತ್ರಕರ್ತರಾದ ಮಾಣಿಕ ಭೂರೆ, ಕಲ್ಯಾಣರಾವ ಮದರಗಾಂವಕರ್, ಉದಯಕುಮಾರ ಮುಳೆ, ಶಿವಪುತ್ರ ಪಾಟೀಲ್, ಪ್ರದೀಪ ವಿಸಾಜಿ, ಡಿಕೆ ಪ್ರಲ್ಹಾದ್, ವೀರಶೆಟ್ಟಿ ಮಲಶೆಟ್ಟಿ, ಖಾಜಾ ಸತರ್ಾಜೋದ್ದಿನ್, ವೀರಣ್ಣ ಮಂಠಾಳಕರ್, ಅಕ್ಬರ್, ಖುತುಬೋದ್ದಿನ್, ಮೊಹಮ್ಮೊದ್ ಮಿಯಾ, ಸಾವುದ್ ಅನ್ವರ್, ಝಾಕೀರ್ ಅವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಹೋರಾಟಗಾರ ರವಿ ನಾವದ್ಗೇಕರ್ ನಿರೂಪಣೆ ಮಾಡಿದರು.