

ಶಹಾಪುರ: ಜೀವನಕ್ಕೆ ಮಾರ್ಗದರ್ಶನ ನೀಡುವ ಗುರುವಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಭವದ ಭಯ ನೀಗಿಸುವವನೇ ಗುರು ಎಂದು ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಹೇಳಿದರು.
ನಗರದ ಗೋಕುಲ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗುರುವನ್ನು ಬ್ರಹ್ಮಾದಿ ದೇವತೆಗಳಿಗೆ ಹೋಲಿಸಲಾಗಿದೆ. ಹರ ಮುನಿದರೆ ಗುರು ಕಾಯುವನು ಎಂಬAತೆ ಗುರುವಿನ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಸಾಧನೆಯತ್ತ ಮುನ್ನಡೆಯಬೇಕು ಎಂದರು.
ಉಪನ್ಯಾಸಕರಾದ ಡಿ.ಪಿ.ಸಜ್ಜನ್ ಮಾತನಾಡಿ, ಈ ವಿದ್ಯಾ ಸಂಸ್ಥೆ ಬೆಳೆಯಲು ಶಿಕ್ಷಕರ ಮತ್ತು ಮಕ್ಕಳ ಶ್ರಮವೇ ಕಾರಣ. ಶಿಕ್ಷಕರನ್ನು ಗೌರವದಿಂದ ಕಂಡು ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಸಂಸ್ಥೆ ಸಂಸ್ಥಾಪಕ ಪ್ರಭುಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಂ.ಡಿ.ಇಮ್ರಾನ್, ಉಪನ್ಯಾಸಕರಾದ ಪರಶುರಾಮ, ಶರಣಮ್ಮ, ಖಾಸಿಂಸಾಬ್, ಚನ್ನಬಸಪ್ಪ, ಶಶಿಕುಮಾರ, ಶರಣ ಬಸ್ಸಪ್ಪ, ಅಣ್ಣಾರಾವ, ಮಹೇಶ, ಅಡಿವೆಪ್ಪ, ಜ್ಯೋತಿ ಹಾಗೂ ವಿದ್ಯಾರ್ಥಿಗಳಿದ್ದರು.
ಸಾಕ್ಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಹೇಶ ಸ್ವಾಗತಿಸಿದರು, ಸಾನಿಯಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.